ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.30: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕರಾಗಿ ನಿವೃತ್ತರಾದ ಡಿ.ಪಿ. ಮುರಳೀಧರ್ ಅವರಿಗೆ ಇಲಾಖೆ ಸಿಬ್ಬಂದಿ ಮತ್ತು ಪತ್ರಕರ್ತ ಮಿತ್ರರಿಂದ ಶನಿವಾರ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಇದೇ ದಿನ ನಿವೃತ್ತರಾದ ಜಂಟಿ ನಿರ್ದೇಶಕ ಕೆ.ಪಿ. ಪುಟ್ಟಸ್ವಾಮಯ್ಯ, ಬಿ.ಎಸ್. ಲತಾ ಮತ್ತು ಸಿ.ಧನರಾಜ್ ಅವರನ್ನೂ ಸಹ ಬೀಳ್ಕೊಟ್ಟು ನೆನಪಿನ ಕಾಣಿಕೆಗಳನ್ನು ನೀಡುವ ಮೂಲಕ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಆಡಳಿತ ವಿಭಾಗ ಉಪನಿರ್ದೇಶಕ ಬಸವರಾಜ ಡೊಳ್ಳಿನ ಮಾತನಾಡಿ, ಮುರಳೀಧರ್ ಅವರಂತಹ ಅಧಿಕಾರಿಗಳು ಇಲಾಖೆಗೆ ಆಸ್ತಿಯಾಗಿದ್ದರು. ತಮ್ಮ ಕಿರಿಯ ಅಧಿಕಾರಿ ಮತ್ತು ಸಿಬ್ಬಂದಿಯೊಂದಿಗೆ ಯಾವುದೇ ಬಿಗುಮಾನಗಳು ಇಲ್ಲದೆ ಅವರೊಂದಿಗೆ ಬೆರೆಯುವ ಮೂಲಕ ಕೆಲಸವನ್ನು ಕಲಿಸಿಕೊಡುತ್ತಿದ್ದರು. ಅಂತವರ ಸೇವೆ ಇಲಾಖೆಗೆ ಇನ್ನೂ ಅಗತ್ಯವಿತ್ತು ಎಂದು ಹೇಳಿದರು.
ಕೆ.ಪಿ. ಪುಟ್ಟಸ್ವಾಮಯ್ಯ ಅವರು ವಿಧಾನಸೌಧ ಪತ್ರಿಕಾ ವಿಭಾಗದ ಅಧಿಕಾರಿಯಾಗಿ ಕಳೆದ 17ವರ್ಷಗಳಿಂದ ಕಾರ್ಯನಿರ್ವಹಿಸಿದ್ದಾರೆ. ಅವರ ಸೇವೆ ಕಿರಿಯ ಅಧಿಕಾರಿಗಳಿಗೆ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಇಲಾಖೆ ಉಪನಿರ್ದೇಶಕಿ ಪಲ್ಲವಿ ಹೊನ್ನಾಪುರ, ನಾವು ಹೊಸದಾಗಿ ಇಲಾಖೆಗೆ ಅಧಿಕಾರಿಗಳಾಗಿ ಬಂದಾಗ ಹೇಗೆ ಕೆಲಸ ಮಾಡಬೇಕು ಎಂಬುದನ್ನು ಕಲಿಸಿಕೊಟ್ಟವರು ಮುರಳೀಧರ್ ಅವರು. ಅವರು ಇದ್ದಲ್ಲಿ ಉತ್ಸಾಹ, ನಗು, ಅಷ್ಟೇ ಕೆಲಸದಲ್ಲಿ ಶ್ರದ್ಧೆ ಇರುತ್ತದೆ ಎಂದರು.
ಮಾಧ್ಯಮ ಅಕಾಡೆಮಿಯ ಕಾರ್ಯದರ್ಶಿ ಪೂರ್ಣಿಮಾ ಮಾತನಾಡಿ, ಮುರಳೀಧರ್ ಅವರು ಟೆನ್ಷನ್ ಫ್ರೀ ಅಧಿಕಾರಿ ಆಗಿದ್ದರು. ಕೆಲ ಅಧಿಕಾರಿಗಳು ತಾವೂ ತಲೆಬಿಸಿ ಮಾಡಿಕೊಂಡು ಅಧೀನದ ಅಧಿಕಾರಿಗಳಿಗೂ ಅದನ್ನು ಹಂಚುತ್ತಾರೆ. ಆದರೆ, ಮುರಳೀಧರ್ ಅವರು ನಗುನಗಿಸುತ್ತಲೇ ಕೆಲಸದಲ್ಲಿ ಶ್ರದ್ಧೆ ಕಲಿಸಿಕೊಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಡಿ.ಪಿ. ಮುರಳೀಧರ್ ಮಾತನಾಡಿ, ಸರ್ಕಾರ ಮತ್ತು ಮಾಧ್ಯಮಗಳ ಮಧ್ಯೆ ಕೊಂಡಿಯಾಗಿ ವಾರ್ತಾ ಇಲಾಕೆ ಕೆಲಸ ಮಾಡುತ್ತಿದೆ. ಅನೇಕ ಸಂಕಷ್ಟ ಮತ್ತು ಸವಾಲುಗಳನ್ನು ಎದುರಿಸುವ ನಿಟ್ಟಿನ್ಲಲಿ ಇಲಾಖೆ ಅಧಿಕಾರಿಗಳ ಸಮನ್ವಯ ಅತಿ ಮುಖ್ಯವಾಗಿದ್ದು, ಈ ದಿಸೆಯಲ್ಲಿ ಕಳೆದ ಮೂರು ದಶಕಗಳ ಕಾಲ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ತೃಪ್ತಿ ನನಗೆ ಇದೆ ಎಂದರು.
ಇಲಾಖೆಯ ಅಧಿಕಾರಿಗಳೇ ಬಡ್ತಿ ಪಡೆದು, ನಿರ್ದೇಶಕರ ಹುದ್ದೆಯಲ್ಲಿ ಕಾಯಂ ಆಗಿದ್ದರೆ ಇಲಾಖೆಯ ವೃತ್ತಿಪರತೆ ಮತ್ತಷ್ಟು ದ್ವಿಗುಣಗೊಳಿಸಬಹುದು. ಪ್ರಚಾರ ಸ್ವರೂಪದ ಇಲಾಖೆಯಾಗಿರುವುದರಿಂದ ಮಾಧ್ಯಮ ದೃಷ್ಟಿಕೋನ ಇಲಾಖೆಗೆ ಬೇಕಾಗಿರುವುದರಿಂದ ಆ ಹಿನ್ನೆಲೆ ಇದ್ದವರೇ ಅಧಿಕಾರಿಗಳಾಗಿದ್ದರೆ ಮತ್ತಷ್ಟು ಇಲಾಖೆಯಲ್ಲಿ ದಕ್ಷತೆ ತರಬಹುದು ಎಂದು ಸೇವೆ ಸಲ್ಲಿಸಿದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯ ಸಹಕಾರ ಸ್ಮರಿಸಿದರು.
ಉಪ ನಿರ್ದೇಶಕರಾಗಿ ನಿವೃತ್ತಾದ ಕೆ.ಪಿ. ಪುಟ್ಟಸ್ವಾಮಯ್ಯ ಮಾತನಾಡಿ, ಇಲಾಖೆಯಲ್ಲಿ ಹಲವು ಸವಾಲುಗಳನ್ನು ಎದರಿಸಿ ಕೆಲಸ ಮಾಡಿದ ತೃಪ್ತಿ ನನಗೆ ಇದೆ. ಪತ್ರಕರ್ತರ ಮತ್ತು ಇಲಾಖೆಯ ಮಧ್ಯೆ ನಿರ್ವಹಣೆ ಸಾಧಿಸುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಜೊತೆಗೆ ವಿಧಾನಸೌಧದ ಪತ್ರಿಕಾ ಕಚೇರಿಯ ಕಾರ್ಯನಿರ್ವಹಣೆ ಅತಿ ಸೂಕ್ಷ್ಮ ಮತ್ತು ಸಂವಿಧಾನಶೀಲವಾಗಿರುವುದರಿಂದ ಮುಖ್ಯಮಂತ್ರಿ, ಮಂತ್ರಿ ಮತ್ತು ಹಿರಿಯ ಐಎಎಸ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಪತ್ರಕರ್ತರ ಒಮ್ಮತವನ್ನು ಕಾಯ್ದುಕೊಳ್ಳಲುವಲ್ಲಿ ಎಲ್ಲರ ಸಹಕಾರ ನನಗೆ ಇತ್ತು. ಈ ದೆಸೆಯಲ್ಲಿ ಈ ಹುದ್ದೆಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.