ಸುದ್ದಿಮೂಲ ವಾರ್ತೆ
ಬೆಂಗಳೂರು,ಅ.6:ಹೊಸನಗರ ತಾಲ್ಲೂಕು ಕೋಡೂರಿನ ಪತ್ರಕರ್ತರಾದ ಗಣೇಶ ಕೆ. ಅವರ ಸಂಪಾದಕತ್ವದಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಪ್ರಕಟಗೊಳ್ಳುತ್ತಿರುವ ನ್ಯೂಸ್ ಪೋಸ್ಟ್ಮಾರ್ಟಮ್ ಮಾಸಪತ್ರಿಕೆ ಹಾಗೂ ಕಳೆದ ಒಂದೂವರೆ ವರ್ಷಗಳಿಂದ ಪ್ರಸಾರವಾಗುತ್ತಿರುವ ನ್ಯೂಸ್ ಪೋಸ್ಟ್ಮಾರ್ಟಮ್ ನ್ಯೂಸ್ ಯುಟ್ಯೂಬ್ ಚಾನೆಲ್ಲಿನ ಡೈಲಿ ನ್ಯೂಸ್ ವೆಬ್ ಪೋರ್ಟಲ್ನ್ನು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಲೋಕಾರ್ಪಣೆಗೊಳಿಸಿದರು.
ಬೆಂಗಳೂರಿನಲ್ಲಿ ನ್ಯೂಸ್ ಪೋಸ್ಟ್ಮಾರ್ಟಮ್ ಡೈಲಿ ನ್ಯೂಸ್ ವೆಬ್ಸೈಟ್ನ್ನು ಕ್ಲಿಕ್ ಮಾಡುವ ಮೂಲಕ ಲೋಕಾರ್ಪಣೆಗೊಳಿಸಿದ ಸಂತೋಷ್ ಹೆಗ್ಡೆಯವರು, ನ್ಯೂಸ್ ಪೋಸ್ಟ್ಮಾರ್ಟಮ್ ಪತ್ರಿಕಾ ಬಳಗದ ಈ ಹೊಸ ಪ್ರಯತ್ನವನ್ನು ಮೆಚ್ಚಿಕೊಂಡು, ‘ಗಣೇಶ ಅವರ ಸಂಪಾದಕತ್ವದಲ್ಲಿ ಹೊಸನಗರ ತಾಲ್ಲೂಕಿನ ನಿತ್ಯ ಸುದ್ದಿಗಳನ್ನು ಜನರಿಗೆ ತಲುಪಿಸುವ ನ್ಯೂಸ್ ಪೋಸ್ಟ್ಮಾರ್ಟಮ್ ನ್ಯೂಸ್ ವೆಬ್ಪೋರ್ಟಲ್ ಇಂದು ಲೋಕಾರ್ಪಣೆಗೊಂಡಿದೆ. ಹೊಸನಗರ ತಾಲ್ಲೂಕಿನ ಸುದ್ದಿಗಳನ್ನು ಓದುಗರಿಗೆ ತಲುಪಿಸುವ ನ್ಯೂಸ್ ಪೋಸ್ಟ್ಮಾರ್ಟಮ್ ವೆಬ್ಸೈಟ್ ಯಶಸ್ಸು ಕಾಣಲಿ’ ಎಂದು ಶುಭ ಹಾರೈಸಿದರು. ಹಾಗೂ ಗ್ರಾಮೀಣ ಸುದ್ದಿಗಳನ್ನು ಜನರಿಗೆ ಅಂತರ್ಜಾಲದ ಮೂಲಕ ತಲುಪಿಸುವ ಇಂತಹ ಪ್ರಯತ್ನಗಳು ಪತ್ರಿಕೋದ್ಯಮದಲ್ಲಿ ನಡೆಯಬೇಕು ಎಂದು ಹೇಳಿ, ಈ ನಿಟ್ಟಿನಲ್ಲಿ ಮುದ್ರಣ ಹಾಗೂ ವಿಡಿಯೋ ರೂಪದಲ್ಲಿ ಇಷ್ಟು ವರ್ಷಗಳ ಕಾಲ ಬರುತ್ತಿದ್ದ ನ್ಯೂಸ್ ಪೋಸ್ಟ್ಮಾರ್ಟಮ್ ಈಗ ವೆಬ್ಸೈಟ್ ಮೂಲಕವೂ ಸುದ್ದಿಗಳನ್ನು ಬಿತ್ತರಿಸಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ಮೆಚ್ಚಿಕೊಂಡರು.
ನ್ಯೂಸ್ ಪೋಸ್ಟ್ಮಾರ್ಟಮ್ ವೆಬ್ಸೈಟ್ ಮೂಲಕ ಮುಖ್ಯವಾಗಿ ಹೊಸನಗರ ತಾಲ್ಲೂಕಿನಲ್ಲಿ ನಿತ್ಯ ನಡೆಯುವ ಘಟನೆಗಳನ್ನು ಹೊಸನಗರ ತಾಲ್ಲೂಕಿನ ಜೊತೆಜೊತೆಗೇ ಇಡೀ ರಾಜ್ಯಕ್ಕೆ ತಲುಪಿಸುವುದು ನಮ್ಮ ಉದ್ದೇಶವಾಗಿದೆ. ಇದರೊಂದಿಗೆ ವಿಶೇಷ ವರದಿ, ತನಿಖಾ ವರದಿ, ಸಂದರ್ಶನ, ವಿಶೇಷ ಲೇಖನಗಳನ್ನು ಕೂಡಾ ನಾವು ಈ ವೆಬ್ಸೈಟ್ ಮೂಲಕ ನೀಡಲಿದ್ದು, ಹೊಸನಗರ ತಾಲ್ಲೂಕಿನ ಮೊಟ್ಟಮೊದಲ ಅಧಿಕೃತ ಮಾಧ್ಯಮವಾಗಿ ಅಂತರ್ಜಾಲದಲ್ಲಿ ಇದು ನಾವಿಟ್ಟಿರುವ ಮೊದಲ ಹೆಜ್ಜೆಯಾಗಿದೆ.