ಸುದ್ದಿಮೂಲ ವಾರ್ತೆ
ಬೆಂಗಳೂರು , ಮೇ 25: ಚುನಾವಣೆಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ನಿಖಿಲ್ ಕುಮಾರಸ್ವಾಮಿ ಪಕ್ಷದ ಸೋಲಿನ ಹೊಣೆ ಹೊತ್ತು ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಜಕಾರಣದಿಂದ ಬಿಡುವು ಪಡೆದು ಮತ್ತೆ ಚಿತ್ರರಂಗದತ್ತ ಮುಖ ಮಾಡಲು ಸಜ್ಜಾಗಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ಮೇಲು ಕೋಟೆ ಕ್ಷೇತ್ರದಲ್ಲಿ ಪರಾಭವಗೊಂಡಿರುವ ಮಾಜಿ ಶಾಸಕ ಸಿ.ಎಸ್. ಪುಟ್ಟರಾಜು ಕಣಕ್ಕಿಳಿಯಯುವ ಸಾಧ್ಯತೆ ಹೆಚ್ಚಿದೆ. ವಿಧಾನಸಭೆಯಲ್ಲಿ ಸೋಲುಂಡಿರುವ ಸಿ.ಎಸ್. ಪುಟ್ಟರಾಜು ಲೋಕಸಭಾ ಚುನಾವಣೆಗೆ ಈಗಾಗಲೇ ತಯಾರಿ ಆರಂಭಿಸಿದ್ದಾರೆ. ಆದ ಕಾರಣ ನಿಖಿಲ್ ಕುಮಾರ ಸ್ವಾಮಿ ಸದ್ಯಕ್ಕೆ ರಾಜಕೀಯದಿಂದ ದೂರ ಇರಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ರಾಜೀನಾಮೆ ನೀಡಿದ ನಂತರ ಪ್ರಕ್ರಿಯೆ ನೀಡಿರುವ ನಿಖಿಲ್ ಕುಮಾರ ಸ್ವಾಮಿ, ಈ ಸೋಲು ಕೊನೆ ಅಲ್ಲ, ಮುಂದೆ ಪಕ್ಷವನ್ನು ಕಟ್ಟೋಣ. ದಯವಿಟ್ಟು ರಾಜೀನಾಮೆ ಅಂಗೀಕಾರ ಮಾಡಿ ಎಂದು ಪತ್ರದಲ್ಲಿ ಮನವಿ ಮಾಡಿದ್ದೇನೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಸಿಎಂ ಇಬ್ರಾಹಿಂ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಪಕ್ಷದ ಜತೆ ಸದಾ ನಿಲ್ಲುವೆ. ಹೊಸ ನಾಯಕತ್ವಕ್ಕೆ ಅವಕಾಶ ಕೊಡಲು ಪತ್ರದಲ್ಲಿ ಮನವಿ ಮಾಡಿದ್ದು, ಸೋಲಿನಿಂದ ಕಂಗೆಡದೆ ಪಕ್ಷ ಕಟ್ಟುವ ಮಾತು, ಸೋಲೇ ಅಂತಿಮವಲ್ಲ ಎಂದ ತಿಳಿಸಿದ್ದು, ಪಕ್ಷ ಮರು ನಿರ್ಮಾಣ ದಿಸೆಯಲ್ಲಿ ರಾಜೀನಾಮೆ ನೀಡಿದ್ದೇನೆ. ಪಕ್ಷ ಕಟ್ಟುವ ಕೆಲಸದಲ್ಲಿ ನಾನು ಎಂದೂ ಹಿಂಜರಿಯಲಾರೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಯುವಘಟಕವನ್ನು ಸಮರ್ಥವಾಗಿ ಕೊಂಡೊಯ್ಯುವ ನಾಯಕರನ್ನು ಜೆಡಿಎಸ್ ಸದ್ದಿಲ್ಲದೆ ಹುಡುಕುತ್ತಿದೆ ಎನ್ನಲಾಗಿದೆ. ಇಂದು ಆತ್ಮಾವಲೋಕನ ಸಭೆ ನಡೆಯಲಿದೆ. ಈ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆ ಇದೆ. ಪಕ್ಷದ ಯುವಘಟಕ ಅಧ್ಯಕ್ಷ ಸ್ಥಾನದಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಬದಲಿಸಿದ ಬಳಿಕ ಆ ಸ್ಥಾನಕ್ಕೆ ಯಾರು ಸೂಕ್ತ ಎಂಬ ಪ್ರಶ್ನೆಗಳು ಸಹ ಉದ್ಭವವಾಗಿದೆ. ಸಂಸದ ಪ್ರಜ್ವಲ್ ರೇವಣ್ಣ ಹೆಸರು ಪ್ರಬಲವಾಗಿ ಕೇಳಿ ಬಂದಿದೆಯಾದರೂ ಕುಮಾರಸ್ವಾಮಿ ಇದಕ್ಕೆ ಸಮ್ಮತಿ ಸೂಚಿಸುವರೇ ಎಂಬುದು ಯಕ್ಷಪ್ರಶ್ನೆಯಾಗಿದೆ. ಕುಟುಂಬ ರಾಜಕಾರಣ ಇದಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ.