ಸುದ್ದಿಮೂಲ ವಾರ್ತೆ
ಬೆಂಗಳೂರು, ಜು.31: ಐಎಂಎ (ಐ ಮಾನಿಟರಿ ಅಡ್ವೈಸರಿ) ಹಗರಣದಲ್ಲಿ ಭಾಗಿಯಾದ ಆರೋಪಕ್ಕೆ ಗುರಿಯಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ವಾರ್ತಾ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್ ವಿರುದ್ಧದ ವಿಚಾರಣೆಯನ್ನು ಮುಕ್ತಾಯಗೊಳಿಸಿ ರಾಜ್ಯ ಸರ್ಕಾರವು ಸೋಮವಾರ ಆದೇಶಿಸಿದೆ.
ಐಎಂಎ ಹಗರಣದಲ್ಲಿ ನಿಂಬಾಳ್ಕರ್ ಆರೋಪ ಆರೋಪ ರುಜುವಾತಾಗಿಲ್ಲ ಎಂಬ ತನಿಖಾಧಿಕಾರಿಯಾದ ನಿವೃತ್ತ ಜಿಲ್ಲಾ ನ್ಯಾಯಾಧೀಶರ ವರದಿ ಆಧರಿಸಿ ಇಲಾಖಾ ವಿಚಾರಣೆ ಮುಕ್ತಾಯಗೊಳಿಸಲಾಗಿದೆ.
ಐಎಂಎ ಹಗರಣದ ತನಿಖೆಯನ್ನು ರಾಜ್ಯ ಸರ್ಕಾರವು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸಿತ್ತು. ಈ ಸಂಬಂಧ ವಿಸ್ತೃತ ತನಿಖೆ ನಡೆಸಿದ್ದ ಸಿಬಿಐ, ಅಂದಿನ ಅಪರಾಧ ತನಿಖಾ ದಳದ ಪೊಲೀಸ್ ಮಹಾನಿರ್ದೇಶಕರಾಗಿದ್ದ ಹೇಮಂತ್ ನಿಂಬಾಳ್ಕರ್ ವಿರುದ್ಧ ಸಾಮಾನ್ಯ ಇಲಾಖಾ ಕ್ರಮಕ್ಕೆ ಶಿಫಾರಸ್ಸು ಮಾಡಿತ್ತು. ಎಐಎಸ್ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳ ಅಡಿ ನಿಂಬಾಳ್ಕರ್ ಅವರಿಗೆ ಷೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು.
ವಿಚಾರಣಾಧಿಕಾರಿಯು ನಿಂಬಾಳ್ಕರ್ ವಿರುದ್ಧ ಯಾವುದೇ ಆರೋಪ ಸಾಬೀತಾಗಿಲ್ಲ ಎಂದು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ಈ ವರದಿಯನ್ನು ರಾಜ್ಯ ಸರ್ಕಾರವು ಒಪ್ಪಿಕೊಂಡಿದ್ದು, ನಿಂಬಾಳ್ಕರ್ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದೆ.