ಸುದ್ದಿಮೂಲ ವಾರ್ತೆ,
ನವದೆಹಲಿ, ಏ.12: ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಗೆ ಬಿಜೆಪಿಯೇತರ ಪಕ್ಷಗಳು ಈಗಲೇ ಒಂದುಗೂಡಲು ಮುಂದಾಗಿದ್ದು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಬುಧವಾರ ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದರು. ಈ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಉಪಸ್ಥಿತರಿದ್ದರು.
2024ರ ರಲ್ಲಿ ನಡೆಯುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸುವ ಉದ್ದೇಶದಿಂದ ಪ್ರತಿಪಕ್ಷಗಳು ಈಗಲೇ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದು, ನವದೆಹಲಿಯ ಖರ್ಗೆ ಅವರ ನಿವಾಸದಲ್ಲಿ ಬಿಹಾರ ಬುಧವಾರ ಮಹತ್ವದ ಸಭೆ ನಡೆಸಲಾಯಿತು.
ಕಾಂಗ್ರೆಸ್, ಜನತಾ ದಳ (ಯುನೈಟೆಡ್) (ಜೆಡಿಯು) ಮತ್ತು ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಪಕ್ಷಗಳ ಪ್ರಮುಖ ನಾಯಕರು ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟ ಮಾಡಲು ತಯಾರಿ ನಡೆಸುವ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.
ಸಭೆಯ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ನಿತೀಶ್ ಕುಮಾರ್, ಒಗ್ಗಟ್ಟಿಗಾಗಿ ವಿರೋಧ ಪಕ್ಷಗಳ ಐತಿಹಾಸಿಕ ಹೆಜ್ಜೆ ಇಡಲಾಗಿದೆ. ನಮ್ಮ ಜತೆಗೆ ದೇಶದ ಬೇರೆ ಬೇರೆ ನಾಯಕರು ಕೈಜೋಡಿಸಲಿದ್ದಾರೆ. ಈ ಬೆಳವಣಿಗೆ ದೇಶದ ಪ್ರತಿಪಕ್ಷಗಳ ದೃಷ್ಟಿಕೋನವನ್ನು ಬದಲಾವಣೆಗೊಳಿಸಿದೆ ಎಂದು ಹೇಳಿದರು.
ಖರ್ಗೆ ಮತ್ತು ಜೆಡಿಯು ಹಾಗೂ ಆರ್ಜೆಡಿ ನಾಯಕರೊಂದಿಗೆ ಇರುವ ಚಿತ್ರವನ್ನು ಪೋಸ್ಟ್ ಮಾಡಿದ ರಾಹುಲ್ ಗಾಂಧಿ, “ಒಟ್ಟಾಗಿ ನಿಂತಿದ್ದೇವೆ, ಭಾರತಕ್ಕಾಗಿ ಒಟ್ಟಿಗೆ ಹೋರಾಡುತ್ತೇವೆ. ಈ ಸಿದ್ಧಾಂತದ ಕದನದಲ್ಲಿ, ಪ್ರತಿಪಕ್ಷಗಳ ಏಕತೆಯ ಕಡೆಗೆ ಇಂದು ಐತಿಹಾಸಿಕ ಹೆಜ್ಜೆ ಇಡಲಾಗಿದೆ. (ನಾವು) ಒಟ್ಟಿಗೆ ಭಾರತಕ್ಕಾಗಿ ನಿಂತಿದ್ದೇವೆ, ಒಟ್ಟಾಗಿ ಹೋರಾಡುತ್ತೇವೆ,’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಖರ್ಗೆ ಅವರು ಇತ್ತೀಚೆಗೆ ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ವಿರೋಧ ಪಕ್ಷದ ಒಗ್ಗಟ್ಟಿನ ಬಗ್ಗೆ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ನಾಯಕರು ಜೊತೆಗೂಡಿ ಮತ್ತೆ ಸಭೆ ನಡೆಸಲು ತೀರ್ಮಾನಿಸಲಾಗಿದೆ.