ಸುದ್ದಿಮೂಲ ವಾರ್ತೆ
ಬಾಗೇಪಲ್ಲಿ, ನ. 21 : ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲೂಕಿಗೆ ಇದುವರೆಗೂ ಇಂದಿರಾ ಕ್ಯಾಂಟೀನ್ ಭಾಗ್ಯ ದೊರೆತಿಲ್ಲ. ಇದದು ನಂಬಲೇ ಬೇಕಾದ ಸಂಗತಿ. ಕಳೆದ ಬಾರಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಅನುಷ್ಠಾನಕ್ಕೆ ಬಂದ ಇಂದಿರಾ ಕ್ಯಾಂಟೀನ್ ರಾಜ್ಯಾದ್ಯಂತ ತೆರೆಯಲು ಅಂಗೀಕರಿಸಲಾಗಿತ್ತು. ಅದರಂತೆ ರಾಜ್ಯಾದ್ಯಂತ ಆಯಾ ತಾಲೂಕಿನಲ್ಲಿ ಕ್ಯಾಂಟೀನ್ ಪ್ರಾರಂಭಿಸಲಾಗಿತ್ತು. ಆದರೆ ಬಾಗೇಪಲ್ಲಿಯಲ್ಲಿ ಮಾತ್ರ ಅಂದಿನಿಂದ ಇಲ್ಲಿಯವರೆಗೂ ಇಂದಿರಾ ಕ್ಯಾಂಟೀನ್ ಬಾಗಿಲು ತೆರೆಯಲು ಸಾಧ್ಯವಾಗಿಲ್ಲ.
ರಾಜ್ಯಾದ್ಯಂತ ಕೂಲಿ ಕಾರ್ಮಿಕರಿಗೆ, ಬಡ ಜನರಿಗೆ, ಕಡಿಮೆ ದರದಲ್ಲಿ ಊಟ ಸಿಗಬೇಕು ಎಂದು ಮಾಡಿರುವ ಈ ಒಂದು ಯೋಜನೆ, ಬಾಗೇಪಲ್ಲಿಯಲ್ಲಿ ಯಾಕೆ ಇಲ್ಲ. ಬಾಗೇಪಲ್ಲಿ ಪಟ್ಟಣದಲ್ಲಿ ಕೂಲಿ ಕಾರ್ಮಿಕರಿಲ್ಲವೇ? ಬಡ ಜನರಿಲ್ಲವೇ? ಪ್ರತಿ ನಿತ್ಯ ಬೆಳಗಾದರೆ ಪಟ್ಟಣದ ಗೂಳೂರು ಸರ್ಕಲ್ ಬಳಿ ನೂರಾರು ಕೂಲಿ ಕಾರ್ಮಿಕರು ವಿವಿಧ ಕೂಲಿ ಕೆಲಸಗಲಿಗೆ ತೆರಳಲು ಬಂದು ಕಾಯುತ್ತಾರೆ, ಇಂತಹ ಬಾಗೇಪಲ್ಲಿಗೆ ಏಕೆ ಇದುವರೆಗೂ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಿಲ್ಲ ಎಂಬುದು ಸಾರ್ವಜಜನಿಕರ ಡಾಲರ್ ಪ್ರಶ್ನೆ. ಇಂತಹ ಸ್ಥಳದಲ್ಲಿ ಕ್ಯಾಂಟೀನ್ ಇದ್ದಿದ್ದರೆ ಕಾರ್ಮಿಕರಿಗೆ ಅನುಕೂಲ ಆಗುತ್ತಿತ್ತು.
ಪ್ರತಿ ನಿತ್ಯ ಈ ಕಾರ್ಮಿಕರು ಖಾಸಗಿ ಹೋಟೆಲ್ ಮೊರೆ ಹೋಗಬೇಕಾದ ಪರಿಸ್ಥಿತಿ, ಅಲ್ಲಿ ಊಟದ ದರ ಕಂಡು ಒಂದು ಪ್ಲೇಟ್ ಅನ್ನ ತಿನ್ನುವವರು ಅರ್ಧ ಪ್ಲೇಟ್ ಮಾತ್ರ ತೆಗೆದುಕೊಂಡು ತಿನ್ನುತ್ತಿದ್ದಾರೆ. ಬೇರೆ ತಿಂಡಿಗಳ ಮೊರೆ ಹೋಗಕ್ಕೂ ಇನ್ನಷ್ಟು ಬರೆ ಎಂದು ಸುಮ್ಮನಾಗುತ್ತಿದ್ದಾರೆ, ಕಾರಣ ಬಡತನ. ಕೆಲವರು ಮೂರು ಹೊತ್ತು ಬಿಟ್ಟು ಎರಡು ಹೊತ್ತು ತಿನ್ನುವ ಪರಿಸ್ಥಿತಿ ಇಲ್ಲಿನ ಬಡಜನರದ್ದು.
ಕಳೆದ 2013 ವಿಧಾನಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಇಂದಿರಾ ಕ್ಯಾಂಟೀನ್ ಯೋಜನೆ ಘೋಷಣೆ ಮಾಡಿದ್ದರು, ಆಗ ಬಾಗೇಪಲ್ಲಿ ಕ್ಷೇತ್ರಕ್ಕೆ ಮೊದಲ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ವರ್ಧಿಸಿ ಜಯಗಳಿಸಿದ್ದ ಎಸ್.ಎನ್. ಸುಬ್ಬಾರೆಡ್ಡಿ ರಾಜಕೀಯದ ಅನುಭವದ ಕೊರತೆ ಇತ್ತು. 2014 ರಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರಿಕೊಂಡರು. ಆಗಲಾದರೂ ಇಂದಿರಾ ಕ್ಯಾಂಟೀನ್ ಪ್ರಾರಂಭಿಸುತ್ತಾರೆ ಎಂದು ಕಾದರು. ಕ್ಯಾಂಟೀನ್ ಭಾಗ್ಯ ಕೂಡಿ ಬರಲಿಲ್ಲ. 2018 ರಲ್ಲಿ ಮತ್ತೆ ಶಾಸಕರಾದರೂ ಮಾಡಲಿಲ್ಲ, ಈಗ 2023 ರಲ್ಲಿ ಪುನಃ ಶಾಸಕರಾಗಿದ್ದಾರೆ. ಈ ಬಾರಿಯಾದರು ಪ್ರಾರಂಭಿಸುತ್ತಾರೋ ಇಲ್ಲವೋ, ಕಾದು ನೋಡುವ ತಂತ್ರಕ್ಕೆ ಇಲ್ಲಿನ ಜನ ಬಂದಿದ್ದಾರೆ.
ಹಸಿದವನಿಗೆ ಎರಡು ತುತ್ತು ಅನ್ನ ಹಾಕಿದರೆ ಅದಕ್ಕಿಂತ ಪುಣ್ಯದ ಕೆಲಸ ಬೇರೊಂದಿಲ್ಲ ಎಂಬರ್ಥದ ನಾಣ್ಣುಡಿಯಿದೆ. ಅದು ನಿಜವೂ ಹೌದು. ಏಕೆಂದರೆ ಎಲ್ಲ ಜೀವಿಗಳೂ ಜೇವ ಹಿಡಿದುಕೊಂಡಿರುವುದು ಆಹಾರದಿಂದ. ಆಹಾರವಿಲ್ಲದಿದ್ದರೆ ಯಾರು ಇಲ್ಲ. ಆದ್ದರಿಂದ ಅನ್ನದಾನದಿಂದ ಒಬ್ಬರ ಜೀವ ಉಳಿಸಿದ್ದೇವೆ ಎಂದರೆ ಅದು ಪುಣ್ಯದ ಕೆಲಸವಲ್ಲದೇ ಮತ್ತೇನು? ಅಷ್ಟು ಮಹತ್ವ ಇರುವ ಅನ್ನಕ್ಕೆ ಕಡಿಮೆ ದರದಲ್ಲಿ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್ ಬಡವರ ಪಾಲಿಗೆ ಮಹತ್ವ ಯೋಜನೆ. ಈ ಯೋಜನೆ ಬಾಗೇಪಲ್ಲಿ ಪಟ್ಟಣಕ್ಕೆ ಇಲ್ಲದಿರುವುದು ನಮ್ಮ ದುರದೃಷ್ಟ.
ನಾಗಭೂಷನ್. ಎನ್ವಕೀಲರು, ಬಾಗೇಪಲ್ಲಿ
ಕ್ಷೇತ್ರದ ಬಡ ಜನರ ಪರ ಕ್ಷೇತ್ರದ ಎಲ್ಲಾ ಸಮಸ್ಯೆಗಳನ್ನು ಈಡೇರಿಸುತ್ತೇವೆ. ಒಂದು ಅವಕಾಶ ಕೊಡಿ, ಇನ್ನೊಂದು ಅವಕಾಶ ಕೊಡಿ, ಮತ್ತೊಂದು ಅವಕಾಶ ಕೊಡಿ, ಅಂತ ಮೂರು ಬಾರಿ ಗೆದ್ದಿರುವ ನಮ್ಮ ಶಾಸಕರು ಯಾರ ಪರ ಏನು ಮಾಡಿದ್ದಾರೋ ಗೊತ್ತಿಲ್ಲಾ, ಕಡಿಮೆ ದರದಲ್ಲಿ ಬಡ ಜನರು ಮೂರು ಹೊತ್ತು ಹೊಟ್ಟೆ ತುಂಬಾ ತಿಂದು ಬಾಳಬೇಕು ಎಂಬ ಸಿದ್ದರಾಮಯ್ಯ ನವರ ಕನಸು ಬಾಗೇಪಲ್ಲಿನಲ್ಲಿ ನನಸಾಗೆ ಉಳಿದಿದೆ. ಬಡ, ಕೂಲಿ ಕಾರ್ಮಿಕರ, ರೈತರ ಪರ ಎಂದು ಹೇಳುವ ಸರ್ಕಾರ ಮೊದಲು ಇಂದಿರಾ ಕ್ಯಾಂಟೀನ್ ನಿರ್ಮಿಸಿ ಕಾರ್ಮಿಕರಿಗೆ ನೇರವಾಗಿ. ಆ ಮೇಲೆ ನಿಮಗೆ ತೋಚುವ ಯೋಜನೆಗಳನ್ನು ಜಾರಿ ಮಾಡಿ