ಸುದ್ದಿಮೂಲ ವಾರ್ತೆ
ಬೆಂಗಳೂರು, ಜು.12: ಕರ್ನಾಟಕ ಮುದ್ರಾಂಕ ಶುಲ್ಕ ಪರಿಷ್ಕರಣೆ ಮಾಡುವುದಿಲ್ಲ. ಬದಲಿಗೆ ಮಾರ್ಗಸೂಚಿ ದರಗಳನ್ನು ಪರಿಷ್ಕರಣೆ ಮಾಡುವ ಮೂಲಕ ರೈತರಿಗೆ ಲಾಭ ಮಾಡಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ವಿಧಾನ ಪರಿಷತ್ತಿನಲ್ಲಿ ಪಿ.ಎಂ. ಮುನಿರಾಜುಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾಯ್ದೆ 1957ರಲ್ಲಿನ ಷಡ್ಯೂಲ್ನಲ್ಲಿರುವ ಅನುಚ್ಛೇದಗಳಂತೆ ಮುದ್ರಾಂಕ ಶುಲ್ಕವನ್ನು ಆಕರಿಸಲಾಗುತ್ತಿದ್ದು, ಪ್ರಸ್ತುತ ಕ್ರಯಪತ್ರಗಳಿಗೆ ಅನುಚ್ಛೇದ 20 (1)ರನ್ವಯ ಶೇಕಡ 5% ರಷ್ಟು ಮುದ್ರಾಂಕ ಶುಲ್ಕವನ್ನು ಆಕರಿಸಲಾಗುತ್ತಿದೆ. ಈ ಮುದ್ರಾಂಕ ಶುಲ್ಕವನ್ನು ಹೆಚ್ಚಿಸುವ ಪ್ರಸ್ತಾವನೆ ಸದ್ಯಕ್ಕೆ ಸರ್ಕಾರದ ಮುಂದೆ ಇರುವುದಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಜಮೀನುಗಳ ಮೌಲ್ಯ ಪರಿಷ್ಕರಣೆ ಮಾಡಿ ಸುಮಾರು ನಾಲ್ಕೂವರೆ ವರ್ಷ ಮೇಲ್ಪಟ್ಟಿದ್ದು, ಜಮೀನಿನ ಮೌಲ್ಯ ಪರಿಷ್ಕರಣೆಗೆ ಕ್ರಮ ವಹಿಸಲಾಗುವುದು. ಆದರೆ, ಮುದ್ರಾಂಕ ಶುಲ್ಕ ಪರಿಷ್ಕರಣೆ ಇಲ್ಲ ಎಂದು ತಿಳಿಸಿದರು.
ಜಮೀನಿನ ಮೌಲ್ಯ ಹೆಚ್ಚಾದರೆ ಅದರಿಂದ ರೈತರಿಗೆ ಲಾಭವಾಗುತ್ತದೆ. ಈಗ ಮಾರ್ಗಸೂಚಿ ದರ ಮತ್ತು ಮಾರುಕಟ್ಟೆ ದರಕ್ಕೆ ಸಾಕಷ್ಟು ವ್ಯತ್ಯಾಸ ಇರುವುದರಿಂದ ಈ ವ್ಯತ್ಯಾಸದ ಹಣವನ್ನು ಖರೀದಿದಾರರು ನಗದು ರೂಪದಲ್ಲಿ ಬ್ಲಾಕ್ ಮನಿ ಆಗಿ ನೀಡುತ್ತಾರೆ. ಇದನ್ನು ತಪ್ಪಿಸುವ ಉದ್ದೇಶದಿಂದ ಜಮೀನು ಮೌಲ್ಯ ದರ ಹೆಚ್ಚಳ ಮಾಡಿ ಆದಷ್ಟು ಅಧಿಕೃತವಾಗಿಯೇ ಖರೀದಿ ಪ್ರಕ್ರಿಯೆ ನಡೆಯುವಂತೆ ಬದಲಾವಣೆ ಮಾಡಲಾಗುವುದು ಎಂದು ಹೇಳಿದರು.
ಮಾರುಕಟ್ಟೆ ಬೆಲೆ ಹೆಚ್ಚಿಸಲು 35 ಲಕ್ಷ ರೂ. ನಿಂದ 45 ಲಕ್ಷ ರೂ. ವರೆಗಿನ ಆಪಾರ್ಟ್ಮೆಂಟ್ ಅಥವಾ ಫ್ಲಾಟ್ಗಳ ಮೊದಲನೇ ಕ್ರಯದ ಮುದ್ರಾಂಕ ಶುಲ್ಕವನ್ನು ಶೇ.5 ರಿಂದ ಶೇ. 3ರಷ್ಟು ಕಡಿತ ಮಾಡಲಾಗಿತ್ತು. ಈ ಶುಲ್ಕವನ್ನು ಹೆಚ್ಚಳ ಮಾಡುವ ಪ್ರಸ್ತಾವ ಸದ್ಯಕ್ಕೆ ಸರ್ಕಾರದ ಮುಂದೆ ಇರುವುದಿಲ್ಲ ಎಂದು ತಿಳಿಸಿದರು.
ಮಧ್ಯ ಪ್ರವೇಶಿಸಿದ ಮುನಿರಾಜು ಗೌಡ, ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಸಹ ಯಾವುದೇ ಸೌಲಭ್ಯಗಳು ಇಲ್ಲ. ಸರ್ಕಾರಕ್ಕೆ ಹೆಚ್ಚಿನ ಆದಾಯ ತಂದುಕೊಡುತ್ತಿರುವ ಈ ಕಚೇರಿಗಳನ್ನು ಬಾಡಿಗೆ ಕಟ್ಟಡಗಳಲ್ಲಿ ನಡೆಸಲಾಗುತ್ತಿದೆ. ಶೌಚಾಲಯ, ಕುಡಿಯುವ ನೀರು, ಆಸನಗಳು ಸೇರಿದಂತೆ ಸೌಲಭ್ಯಗಳ ಕೊರತೆ ಇದೆ. ಅಲ್ಲದೆ, ಸಬ್ರಿಜಿಸ್ಟ್ರಾರ್ಗಳ ವರ್ಗಾವಣೆಗೆ ಸಹ ದೊಡ್ಡಮಟ್ಟದಲ್ಲಿ ಲಾಭಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಹೇಳಿದರು.
ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಕೆಲವು ಸಬ್ರಿಜಿಸ್ಟ್ರಾರ್ ಕಚೇರಿಗಳನ್ನು ಪಾಸ್ಪೋರ್ಟ್ ಕಚೇರಿಯಲ್ಲಿ ಅಭಿವೃದ್ಧಿ ಪಡಿಸುತ್ತೇವೆ ಎಂದು ಹೇಳದಿದ್ದರೂ ಸಹ, ಆ ಮಾದರಿಯಲ್ಲಿ ನಮ್ಮ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಸೌಲಭ್ಯ ಒದಗಿಸಲು ಪ್ರಯತ್ನಿಸುತ್ತೇವೆ. ಅಲ್ಲದೆ, ದೂರದ ಊರುಗಳಲ್ಲಿರುವ ಸಬ್ರಿಜಿಸ್ಟ್ರಾರ್ ಅಧಿಕಾರಿಗಳನ್ನು ತಂದು ಬೆಂಗಳೂರಿನ ಕೆಲವೆಡೆ ಹಾಕಿದ್ದೇವೆ. ಇಲಾಖೆಯನ್ನು ಸರ್ಕಾರವೇ ನಡೆಸುತ್ತದೆ ಎಂದು ಮಾರ್ಮಿಕವಾಗಿ ತಿಳಿಸಿದರು.