ನವದೆಹಲಿ, ಅ.9: ಕಾಂಗ್ರೆಸ್ ಆಡಳಿತವಿರುವಂತಹ ಎಲ್ಲಾ ರಾಜ್ಯಗಳಲ್ಲಿ ಜಾತಿಗಣತಿ ನಡೆಸಿ ವರದಿಯನ್ನು ಬಿಡುಗಡೆ ಮಾಡಬೇಕು ಎಂಬ ಪ್ರಮುಖ ನಿರ್ಧಾರವನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆ ಕೈಗೊಂಡಿದೆ.
ನವದೆಹಲಿಯಲ್ಲಿ ಸೋಮವಾರ ಸುಮಾರು ನಾಲ್ಕು ತಾಸುಗಳ ಕಾಲ ನಡೆದ ಸಿಡಬ್ಲ್ಯೂಸಿ ಸಭೆಯಲ್ಲಿ ಆರು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಬಿಹಾರದಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಲಾದ ಜಾಗತಿಗಣತಿ ವರದಿಯನ್ನು ಸ್ವಾಗತಿಸುವುದರ ಜೊತೆ ಕಾಂಗ್ರೆಸ್ ಆಡಳಿತವಿರುವ ಎಲ್ಲಾ ರಾಜ್ಯಗಳೂ ಈ ನಡೆ ಅನುಸರಿಸಬೇಕು ಎಂದು ಸಮಿತಿ ನಿರ್ಧರಿಸಿದೆ.
ಕರ್ನಾಟಕದಲ್ಲಿ ಈಗಾಗಲೇ ಜಾತಿಗಣತಿ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಅದರ ಬಿಡುಗಡೆ ಕಾಂಗ್ರೆಸ್ ಹೈಕಮಾಂಡ್ ಸಹ ಒತ್ತಾಸೆಯಾಗಿ ನಿಂತಿರುವುದರಿಂದ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರದಿ ಬಿಡುಗಡೆ ಮಾಡಲಿದ್ದಾರೆಯೇ ಎಂಬು ಕುತೂಹಲ ಸಹ ಮೂಡಿಸಿದೆ.
ಸಿಡಬ್ಲ್ಯುಸಿ ಸಭೆ ನಡೆಯುತ್ತಿರುವುದರ ಮಧ್ಯೆಯೇ ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್ಘಡ, ಮಿಜೋರಾಂ ಮತ್ತು ತೆಲಂಗಾಣ ರಾಜ್ಯಗಳಿಗೆ ಚುನಾವಣೆ ಘೋಷಣೆಯಾಗಿದ್ದು, ವಿರೋಧ ಪಕ್ಷಗಳ ಮೈತ್ರಿಕೂಟದ ಬಲದಿಂದ ಪಂಚ ರಾಜ್ಯಗಳಲ್ಲಿ ಜಯಗಳಿಸುವ ಸಂಬಂಧವೂ ಸಭೆಯಲ್ಲಿ ಚರ್ಚಿಸಿ ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಐತಿಹಾಸಿನ ನಡೆ:
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ರಾಹುಲ್ಗಾಂಧಿ, ಜಾತಿಗಣತಿ ಎಂಬುದು ಐತಿಹಾಸಿಕ ನಡೆ. ‘ಇಂಡಿಯಾ’ ಮೈತ್ರಿಕೂಟದ ಬಹುತೇಕ ಪಕ್ಷಗಳು ಜಾತಿ ಗಣತಿಗೆ ಸಹಮತ ವ್ಯಕ್ತಪಡಿಸಿವೆ. ಕೆಲವು ಪಕ್ಷಗಳು ಸಮಸ್ಯೆಗಳನ್ನು ಎದುರಿಸಬಹುದು. ಆದರೆ ನಮ್ಮದು ಫ್ಯಾಸಿಸ್ಟ್ ಪಕ್ಷವಲ್ಲ. ಮೈತ್ರಿಕೂಟದ ಬಹುತೇಕ ಪಕ್ಷಗಳು ಜಾತಿ ಗಣತಿಗೆ ಒಪ್ಪಿಗೆ ಸೂಚಿಸಿವೆ ಎಂದು ಹೇಳಿದರು.
ಜಾತಿ ಗಣತಿ ಎಂಬುದು ಧರ್ಮ ಅಥವಾ ಜಾತಿಗೆ ಸಂಬಂಧಿಸಿದ್ದಲ್ಲ. ಬಡ ವರ್ಗದವರ ಬಗೆಗಿನ ಕಾಳಜಿ. ಪ್ರಸ್ತುತ ನಾವು ಭಾರತದಲ್ಲಿ ಇದ್ದೇವೆ. ಒಂದು ಅದಾನಿಯವರ ಭಾರತ ಮತ್ತು ಇನ್ನೊಂದು ಬಡವರ ಭಾರತ. ನಮಗೆ ಈ ಹೊಸ ಕ್ಷ- ಕಿರಣ ಬೇಕು ಎಂದು ಹೇಳಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಪರಿಶಿಷ್ಟ ಜಾತಿಗಳು (ಎಸ್ಸಿಗಳು), ಪರಿಶಿಷ್ಟ ಪಂಗಡಗಳು (ಎಸ್ಟಿಗಳು) ಮತ್ತು ಇತರ ಹಿಂದುಳಿದ ವರ್ಗಗಳು (ಒಬಿಸಿ) ಅವರ ಜನಸಂಖ್ಯೆಗೆ ಅನುಗುಣವಾಗಿ ಸಾಮಾಜಿಕ ನ್ಯಾಯ ಮತ್ತು ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರವ್ಯಾಪಿ ಜಾತಿ ಗಣತಿಯನ್ನು ನಡೆಸಬೇಕೆಂಬ ಬೇಡಿಕೆ ಇದೆ. ಆದರೆ, ಈ ಬಗ್ಗೆ ಬಿಜೆಪಿ ಮೌನವಾಗಿದೆ ಎಂದು ಹೇಳಿದರು.
ಜನ ಕಲ್ಯಾಣ ಯೋಜನೆಗಳಲ್ಲಿ ಸರಿಯಾದ ಪಾಲು ಪಡೆಯಲು, ಸಮಾಜದ ದುರ್ಬಲ ವರ್ಗಗಳ ಸ್ಥಿತಿಯ ಕುರಿತು ಸಾಮಾಜಿಕ-ಆರ್ಥಿಕ ದತ್ತಾಂಶವನ್ನು ಹೊಂದಿರುವುದು ಮತ್ತು ಅವರಿಗೆ ಸಾಮಾಜಿಕ ನ್ಯಾಯವನ್ನು ಖಚಿತಪಡಿಸುವುದು ಮುಖ್ಯವಾಗಿದೆ ಎಂದು ಖರ್ಗೆ ಪ್ರತಿಪಾದಿಸಿದರು.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮ್ಯ ಸೇರಿ ಪ್ರಮುಖ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದರು.