ಸುದ್ದಿಮೂಲ ವಾರ್ತೆ
ಬೆಂಗಳೂರು, ಆ.8: ರಾಯಚೂರು ಜಿಲ್ಲೆಯಲ್ಲಿ ಕೈಗಾರಿಕಾ ಪ್ರದೇಶಾಭಿವೃದ್ಧಿಗೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳ ಪರಿಹಾರಕ್ಕೆ ಸಮಗ್ರ ಕ್ರಿಯಾ ಯೋಜನೆ ಸಲ್ಲಿಸುವಂತೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಸೂಚನೆ ನೀಡಿದ್ದಾರೆ.
ಇಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು, ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಸಮಕ್ಷಮ ಜಿಲ್ಲೆಯ ಶಾಸಕರು, ಅಧಿಕಾರಿಗಳು ಮತ್ತು ಕೈಗಾರಿಕೋದ್ಯಮಿಗಳ ಸಭೆಯಲ್ಲಿ ರಾಯಚೂರಿನ ಕೈಗಾರಿಕಾ ಪ್ರದೇಶದಲ್ಲಿ ನೀರು, ವಿದ್ಯುತ್, ರಸ್ತೆ, ಚರಂಡಿ ಮತ್ತು ಘನತ್ಯಾಜ್ಯ ನಿರ್ವಹಣಾ ಘಟಕ ಸಮಸ್ಯೆಗಳ ಕುರಿತು ಮಾಹಿತಿ ಪಡೆದ ಬಳಿಕ ಮಾತನಾಡಿದ ಕೈಗಾರಿಕಾ ಸಚಿವ, ರಾಜ್ಯದ ಎಲ್ಲಾ ಕೈಗಾರಿಕಾ ಪ್ರದೇಶಗಳಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಸಮಗ್ರ ಕ್ರಿಯಾ ಯೋಜನೆ ತಮ್ಮ ಇಲಾಖೆಯಿಂದ ಸಿದ್ಧಪಡಿಸಲಾಗುತ್ತಿದೆ. ಅದಕ್ಕಾಗಿ ರಾಯಚೂರು ಜಿಲ್ಲೆಯಲ್ಲಿ ಕೈಗಾರಿಕಾ ಪ್ರದೇಶ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪಸ್ತಾವನೆ ಸಲ್ಲಿಸುವಂತೆ ಸಚಿವರು ಸೂಚನೆ ನೀಡಿದ್ದಾರೆ.
ಕೃಷ್ಣಾ ನದಿಯಿಂದ ರಾಯಚೂರು ನಗರದ ಕುಡಿಯುವ ನೀರು ಮತ್ತು ಕೈಗಾರಿಕೆಗಳಿಗೆ ಹಂಚಿಕೆಯಾದ 10 ಎಂಎಲ್ಡಿ ನೀರು ಸರಬರಾಜು ಆಗದ ಕಾರಣ ಕೈಗಾರಿಕೆಗಳಿಗೆ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ. ಅದಕ್ಕಾಗಿ ಕೈಗಾರಿಕೆಗಳಿಗೆ ಅವಶ್ಯಕವಿರುವ ನೀರು ಸರಬರಾಜು ಮಾಡುವ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವರದಿ ನೀಡುವಂತೆ ಕೈಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ಹೆಚ್ಚು ಹತ್ತಿ ಬೆಳೆಯುವ ಪ್ರದೇಶವಾಗಿರುವುದರಿಂದ ಮೆಗಾ ಟೆಕ್ಸ್ಟೈಲ್ ಪಾರ್ಕ್ ಸ್ಥಾಪನೆ ಮಾಡುವ ಅಗತ್ಯತೆಯನ್ನು ಸಭೆಯಲ್ಲಿ ಭಾಗವಹಿಸಿದ ಸಚಿವ ಶಾಸಕರು ಮತ್ತು ಕೈಗಾರಿಕೆ ಉದ್ಯಮಿಗಳು ಕೋರಿದಾಗ ಇದಕ್ಕೆ ಸಂಬಂಧಪಟ್ಟಂತೆ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಮೆಗಾ ಟೆಕ್ಸ್ಟೈಲ್ ಪಾರ್ಕ್ ಸ್ಥಾಪನೆ ಮಾಡುವ ಕುರಿತಂತೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲು ತೀರ್ಮಾನಿಸಿರುವುದಲ್ಲದೆ ಈಗಾಗಲೇ ಕಳೆದ ಮುಂಗಡ ಪತ್ರದಲ್ಲಿ ಘೋಷಣೆಯಾದ 50 ಎಕರೆ ಪ್ರದೇಶದ ಜವಳಿ ಪಾರ್ಕ್ ನಿರ್ಮಿಸಲು ಕ್ರಿಯಾ ಯೋಜನೆ ಸಿದ್ದಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ.
ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್ ಬೋಸರಾಜು ಮಾತನಾಡಿ, ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಹಲವಾರು ಅವಕಾಶಗಳಿವೆ. ಹಿಂದುಳಿದ ಪ್ರದೇಶವಾಗಿರುವ ಕಲ್ಯಾಣ ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರವಾಗಿ ರಾಯಚೂರು ಹೊರಹೊಮ್ಮುತ್ತಿದೆ. ಕೈಗಾರಿಕೆಗಳ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿತರಾಗುವಂತೆ ಮಾಡುವ ನಿಟ್ಟಿನಲ್ಲಿ ನಾವುಗಳು ಅಗತ್ಯ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಬೇಕು ಎಂದು ಹೇಳಿದರು.
ಕೈಗಾರಿಕೆಗಳ ಸುಪರ್ದಿಗೆ ನಿರ್ವಹಣೆ:
ರಾಜ್ಯದ ಎಲ್ಲಾ ಹಳೇ ಕೈಗಾರಿಕಾ ಪ್ರದೇಶಗಳಲ್ಲಿ ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿಪಡಿಸಿದ ನಂತರ ಆಯಾ ಕೈಗಾರಿಕಾ ಸಂಘಗಳ ಸುಪರ್ಧಿಗೇ ಅವುಗಳ ನಿರ್ವಹಣೆಯನ್ನು ಒಪ್ಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ದಿ ಸಚಿವರಾದ ಎಂ.ಬಿ ಪಾಟೀಲ ಭರವಸೆ ನೀಡಿದರು.
ರೈಸ್ ಮಿಲ್ಗಳಿಗೆ ಮೀಸಲಾದ ನೀರಿನ ಪೈಪ್ಲೈನ್:
ರಾಯಚೂರು ನಗರದಲ್ಲಿ 90 ಕ್ಕೂ ಹೆಚ್ಚು ರೈಸ್ಮಿಲ್ ಗಳಿವೆ. ಈ ರೈಸ್ಮಿಲ್ಗಳ ನಿರ್ವಹಣೆಗಾಗಿ ನೀರಿನ ಅಗತ್ಯವಿದೆ. ಕೈಗಾರಿಕಾ ಪ್ರದೇಶಗಳಿಗೆ ಮೀಸಲಾದ ನೀರಿನ ಸಂಪರ್ಕ ಇಲ್ಲದೆ ಇರುವ ಕಾರಣ ರೈಸ್ ಮಿಲ್ಗಳು ತುಂಬ ಸಮಸ್ಯೆಗೆ ಸಿಲುಕಿವೆ. ಅಲ್ಲದೇ, ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ರೈಸ್ ಮಿಲ್ಗಳನ್ನು ಸ್ಥಾಪಿಸಲು ನೀರಿನ ಅಗತ್ಯತೆ ಹೆಚ್ಚಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ರೈಸ್ ಮಿಲ್ ಗಳಿಗೆ ಮೀಸಲಾದ ಪೈಪ್ ಲೈನ್ ನಿರ್ಮಾಣದ ವರದಿಯನ್ನ ಸಲ್ಲಿಸುವಂತೆ ಸಚಿವ ಎಂ.ಬಿ ಪಾಟೀಲ ಕೆಐಡಿಬಿ ಅಧಿಕಾರಿಗಳಿಗೆ ಸೂಚಿಸಿದರು.
ಔಷಧ ಕಂಪನಿಗಳ ತ್ಯಾಜ್ಯ ವಿಲೇವಾರಿ:
ಔಷಧ ಕಂಪನಿಗಳ ಹಬ್ ಆಗಿ ಹೊರಹೊಮ್ಮಿರುವ ರಾಯಚೂರು ಕೈಗಾರಿಕಾ ಪ್ರದೇಶದಲ್ಲಿ ಸಿಇಟಿಪಿಯ ಕೊರತೆಯಿದೆ. ಇದರಿಂದಾಗಿ ತ್ಯಾಜ್ಯವು ಅಂತರ್ಜಲ ಸೇರ್ಪಡೆಯಾಗುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ತ್ಯಾಜ್ಯ ವಿಲೇವಾರಿ ಸೌಲಭ್ಯವನ್ನು ಅಳವಡಿಸುವ ಕಾರ್ಯ ವಿಳಂಬವಾಗಿರುವುದನ್ನ ಕೈಗಾರಿಕೋದ್ಯಮಿಗಳು ಸಭೆಯ ಗಮನಕ್ಕೆ ತಂದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಸಚಿವರು, ಕೂಡಲೇ ತ್ಯಾಜ್ಯ ವಿಲೇವಾರಿ ಕೇಂದ್ರವನ್ನು ನಿರ್ಮಿಸಬೇಕು. ಇದಕ್ಕೆ ಈಗಾಗಲೇ ಅನುಮತಿ ನೀಡಿರುವ ಮದರ್ ಅರ್ಥ್ ಕಂಪನಿಯ ಜೊತೆಯಲ್ಲಿ ಚರ್ಚಿಸಿ ಕೈಗಾರಿಕೋದ್ಯಮಿಗಳೀಗೆ ಅನುಕೂಲ ಮಾಡಿಕೊಡಬೇಕು ಎಂದು ಸೂಚಿಸಿದರು.
ಬೆಂಗಳೂರು- ಹೈದರಾಬಾದ್ ನಡುವೆ ಸಂಚರಿಸಲಿರುವ ವಂದೇ ಭಾರತ್ ರೈಲು ರಾಯಚೂರು ಮೂಲಕ ಸಂಚರಿಸುವ ಹಾಗೆ ಮಾಡಬೇಕು. ಹಾಗೆಯೇ ಅಲ್ಲಿ ನಿಲುಗಡೆಗೆ ಅವಕಾಶ ನೀಡುವಂತೆ ಕೇಂದ್ರ ರೈಲ್ವೇ ಇಲಾಖೆಗೆ ಪತ್ರ ಬರೆಯುವಂತೆ ಕೈಗಾರಿಕೋದ್ಯಮಿಗಳು ಸಚಿವರಿಗೆ ಮನವಿ ಮಾಡಿದರು. ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಕೈಗಾರಿಕಾ ಸಂಘಗಳ ಮನವಿಯ ಆಧಾರದ ಮೇಲೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯುವ ಭರವಸೆ ನೀಡಿದರು.
ಲಾಜಿಸ್ಟಿಕ್ ಪಾರ್ಕ್ ನಿರ್ಮಾಣ:
ರಾಯಚೂರು ನಗರ ಲಾಜಿಸ್ಟಿಕ್ ಹಬ್ ಆಗುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಹೊಂದಿದೆ. ಹತ್ತಿರದಲ್ಲೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ರೈಲು ಮತ್ತು ರಾಷ್ಟ್ರೀಯ ಹೆದ್ದಾರಿಗಳ ನೆಟ್ ವರ್ಕ್ ಇದ್ದು ಈ ಬಗ್ಗೆಯೂ ಹೆಚ್ಚಿನ ಆಸಕ್ತಿ ವಹಿಸುವಂತೆ ಕೈಗಾರಿಕೋದ್ಯಮಿಗಳ ಮನವಿಗೆ ಸ್ಪಂದಿಸಿದ ಕೈಗಾರಿಕಾ ಸಚಿವರು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಸಭೆಯಲ್ಲಿ ಶಾಸಕರಾದ ಬಸನಗೌಡ ದದ್ದಲ್, ಬಸನಗೌಡ ತುರ್ವಿಹಾಳ, ಶರಣಗೌಡ ಬಯ್ಯಾಪುರ, ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಸೆಲ್ವಕುಮಾರ್, ಕೈಗಾರಿಕಾ ಅಭಿವೃದ್ದಿ ಆಯುಕ್ತರಾದ ಗುಂಜನ್ ಕೃಷ್ಣ, ರಾಯಚೂರು ಕೈಗಾರಿಕೋದ್ಯಮಿ ಮತ್ತು ವರ್ತಕರ ಸಂಘದ ಪದಾಧಿಕಾರಿಗಳಾದ ಕಮಲ್ ಕುಮಾರ್ ಜೈನ್, ರಾಮಚಂದ್ರ ಪ್ರಭು, ಲಕ್ಷ್ಮೀ ರೆಡ್ಡಿ, ರಮೇಶ್, ಸಾವಿತ್ರಿ ಪುರುಷೋತ್ತಮ್ಮತ್ತಿತರರು ಭಾಗವಹಿಸಿದ್ದರು.