ಸುದ್ದಿಮೂಲ ವಾರ್ತೆ
ತುಮಕೂರು, ಅ.20: ತುಮಕೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು, ಯಾವುದೇ ಸಬೂಬು ನೀಡದೆ,
ವಿಳಂಬಧೋರಣೆ ಅನುಸರಿಸದೆ ನಿಗಧಿತ ಸಮಯದೊಳಗಾಗಿ ಪೂರ್ಣಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ಪಾಲಿಕೆ ಆಯುಕ್ತರು ಹಾಗೂ ಇತರೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಕೆಎಸ್ಆರ್ಟಿಸಿ ಬಸ್ ನಿಲ್ದಾಣವನ್ನು ನವೆಂಬರ್ ತಿಂಗಳೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕೆಲವು ತಾಂತ್ರಿಕ ಕಾರಣಗಳಿಂದ ಸ್ಮಾರ್ಟ್ ಬಸ್ ನಿಲ್ದಾಣದ ಕಾಮಗಾರಿಯನ್ನು ಜನವರಿ-2024ರ ಮಾಹೆಯವರೆಗೆ ವಿಸ್ತರಿಸುವಂತೆ ಕೋರಿ ಸರ್ಕಾರಕ್ಕೆ ಪತ್ರ ಸಲ್ಲಿಸಲಾಗಿದೆ ಎಂಬ ಅಧಿಕಾರಿಗಳ
ಸಮಜಾಯಿಷಿಯನ್ನು ಒಪ್ಪಿಕೊಳ್ಳದ ಸಚಿವರು, ಈ ಸಬೂಬನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನವೆಂಬರ್-2023ರ ಮಾಹೆಯೊಳಗಾಗಿ ಬಸ್ ನಿಲ್ದಾಣವನ್ನು ಪೂರ್ಣಗೊಳಿಸದಿದ್ದಲ್ಲಿ ದಂಡ ಸಂಹಿತೆಯನ್ವಯ ಗುತ್ತಿಗೆದಾರರಿಗೆ ಪ್ರತಿ ದಿನ ದಂಡ ವಿಧಿಸಲಾಗುವುದು ಮತ್ತು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಅಮಾನಿಕೆರೆಗೆ ತ್ಯಾಜ್ಯ ನೀರು ಸೇರುವಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವ ಸಂಬಧ ಚರಂಡಿ ನೀರಿನ ಬದಲಿ ಮಾರ್ಗದ ಕಾಮಗಾರಿಯನ್ನು ಇನ್ನು 10 ದಿನದೊಳಗಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು. ತುಮಕೂರು ನಗರವನ್ನು ಸೌಂದರ್ಯೀಕರಣಗೊಳಿಸುವ
ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಈ ಹಿಂದೆಯೇ ತಾವು ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದು, ಆದರೆ ಇದುವರೆಗೂ ಈಕೆಲಸ ಆಗಿರುವುದಿಲ್ಲ. ಆದುದರಿಂದ ಶೀಘ್ರದಲ್ಲೇ ನಗರದ ಸೌಂದರ್ಯೀಕರಣ ಕೆಲಸಗಳನ್ನು ಪ್ರಾರಂಭಿಸುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣವಾಗಿರುವ 105 ಉದ್ಯಾನವನಗಳ ಅಭಿವೃದ್ಧಿ ಹಾಗೂ ನಿರ್ವಹಣೆ ಸರಿಯಾಗಿ ಆಗಿರುವುದಿಲ್ಲ. ಮುಂದಿನ ದಿನಗಳಲ್ಲಿ ಉದ್ಯಾನವನಗಳಿಗೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಲಾಗುವುದು ಎಂದು ಸಚಿವರು ಎಚ್ಚರಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿ.ಪಂ. ಸಿಇಓ ಜಿ.ಪ್ರಭು, ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ, ಪೊಲೀಸ್ ವರಿಷ್ಟಾಧಿಕಾರಿ ಅಶೋಕ್ ಕೆ.ವಿ. ಸೇರಿದಂತೆ ಸ್ಮಾರ್ಟ್ ಸಿಟಿಯೋಜನೆಯ ಅಧಿಕಾರಿಗಳು ಉಪಸ್ಥಿತರಿದ್ದರು.