ಬೆಂಗಳೂರು, ಜ.20: ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿಯನ್ನು ಫೆಬ್ರವರಿ 2ನೇ ವಾರದೊಳಗೆ ಪೂರ್ಣಗೊಳಿಸುವಂತೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಜಯಪುರ ವಿಮಾನ ನಿಲ್ದಾಣದ ನಿರ್ಮಾಣ ಹಂತದ ಕಾಮಗಾರಿ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಂತಿಮಸ್ತರದ ಮತ್ತು ಮುಕ್ತಾಯ ಹಂತದ ಕಾಮಗಾರಿ ಮತ್ತು ಇತರೆ ಪ್ರಕ್ರಿಯೆಗಳ ಕುರಿತು ಸಚಿವರು ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಇತರೆ ಅಧಿಕಾರಿಗಳೊಂದಿಗೆ ವಿಸ್ತೃತವಾದ ಚರ್ಚೆ ನಡೆಸಿದರು.
ಫೆಬ್ರವರಿ 2ನೇ ವಾರದಲ್ಲಿ ಈ ವಿಮಾನ ನಿಲ್ದಾಣ ಕಾರ್ಯಾರಂಭಕ್ಕೆ ಸಿದ್ಧವಿರುವಂತೆ ಕಾಮಗಾರಿಯನ್ನು ಕ್ಷಿಪ್ರಗತಿಯಲ್ಲಿ ಪೂರ್ಣಗೊಳಿಸಲು ಸಚಿವರು ಸೂಚನೆ ನೀಡಿದರು.
ಇಂಡಿಗೋ, ಸ್ಟಾರ್ ಏರ್, ಅಲಯನ್ಸ್ ಏರ್ ಮತ್ತು ವಿಸ್ತಾರ ವಿಮಾನಯಾನ ಸಂಸ್ಥೆಗಳೊಂದಿಗೆ ವಿಮಾನಯಾನ ಪ್ರಾರಂಭಿಸುವ ಕುರಿತು ಆ ವಿಮಾನ ನಿಲ್ದಾಣದಲ್ಲಿ ಒದಗಿಸಲಾಗಿರುವ ಸೌಲಭ್ಯಗಳ ಕುರಿತು ಸಂಸ್ಥೆಗಳಿಗೆ ವಿವರ ನೀಡಲು ಕ್ರಮ ಕೈಗೊಳ್ಳಲು ಸಹ ನಿರ್ದೇಶಕರಿಗೆ ಸೂಚಿಸಲಾಯಿತು.
ಅಗ್ನಿಶಾಮಕ ಉಪಕರಣಗಳನ್ನು ಮತ್ತು ನ್ಯಾವಿಗೇಷನ್ ಸಲಕರಣೆಗಳನ್ನು ಪಡೆಯಲು ಮತ್ತು ಸ್ಥಾಪಿಸಲು ತ್ವರಿತ ಗತಿಯಲ್ಲಿ ಕ್ರಮಕೈಗೊಳ್ಳಲು ಸೂಚಿಸಲಾಯಿತು. ವಿಮಾನ ನಿಲ್ದಾಣ ಪರವಾನಿಗೆ ಪ್ರಕ್ರಿಯೆಗೆ ದಾಖಲಾತಿಗಳನ್ನು ಸಿದ್ಧಪಡಿಸಿ ಮುಂದಿನ ಕ್ರಮವಹಿಸಲು ಸೂಚಿಸಲಾಯಿತು.
ಪ್ಯಾಕೇಜ್1, 2, 3ರ ಪ್ರಗತಿ ಮತ್ತು ವಿಮಾನನಿಲ್ದಾಣ ಪ್ರಾಧಿಕಾರ ಜೊತೆಗಿನ ಒಪ್ಪಂದಗಳು ಅಂತಿಮಗೊಳಿಸುವುದನ್ನು ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಕೈಗಾರಿಕಾ ಬಂಡವಾಳ ಅಭಿವೃದ್ಧಿ ನಿಗಮ ಇವರಿಗೆ ವಹಿಸಲಾಯಿತು.