ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಏ.10: ತಾಲ್ಲೂಕಿನ ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ಅಂಗವಿಕಲರು, ಹಿರಿಯ ನಾಗರಿಕರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಅಳವಡಿಸಬೇಕು ಎಂದು ತಾಲ್ಲೂಕು ಚುನಾವಣಾಧಿಕಾರಿ ಜಾವಿದ್ ನಸೀಮಾ ಖಾನಮ್ ಹೇಳಿದರು
ಮತಗಟ್ಟೆ ಕೇಂದ್ರಗಳಲ್ಲಿ ಒದಗಿಸಬೇಕಾದ ಸೌಲಭ್ಯಗಳ ಪ್ರಗತಿ ಸಭೆ ಹಾಗೂ ತಾಲ್ಲೂಕು ಸ್ವೀಪ್ ಸಮಿತಿಯ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮತದಾನ ಮಾಡಲು ಬರುವವರಿಗೆ ಮತಗಟ್ಟೆ ಕೇಂದ್ರಗಳಲ್ಲಿ ರ್ಯಾಂಪ್ ಮತ್ತು ರೈಲಿಂಗ್ಸ್, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಕಿಟಕಿ ಬಾಗಿಲು, ಉತ್ತಮ ಗಾಳಿ ಬೆಳಕು, ನೆರಳಿನ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳ ಬಗ್ಗೆ ಗಮನಹರಿಸಬೇಕು ಎಂದು ಅವರು ಸೂಚನೆ ನೀಡಿದರು.
ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವೀಪ್ ಬಗೆಗಿನ ಜಾಗೃತಿ ಚಿತ್ರಗಳು, ಬರಹಗಳು ಇದ್ದರೆ ಉತ್ತಮ. ಯಾವುದೇ ರೀತಿಯಾಗಿ ಮಕ್ಕಳನ್ನು ಮತದಾನದ ಅರಿವು ಮೂಡಿಸಲಿಕ್ಕಾಗಿ ಬಳಕೆ ಮಾಡುವುದು ಬೇಡ. ಮತಗಟ್ಟೆ ಕೇಂದ್ರಗಳಲ್ಲಿ ಗಾಲಿಕುರ್ಚಿ ವ್ಯವಸ್ಥೆ, ರ್ಯಾಂಪ್ ಸೇರಿದಂತೆ ಮೂಲಭೂತ ಸೌಕರ್ಯಗಳು ಇದ್ದರೆ ಸೂಕ್ತ ಎಂದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿವಿಧ ರೀತಿಯಾಗಿ ವಿನೂತನವಾಗಿ ಮತದಾನ ಬಗ್ಗೆ ಜಾಗೃತಿ ಮೂಡಿಸುವಂತಾಗಬೇಕು ಎಂದು ಸಲಹೆ ನೀಡಿದರು.