ಸುದ್ದಿಮೂಲ ವಾರ್ತೆ
ಮೈಸೂರು, ನ.19 : ಪಕ್ಷದ ಹಿರಿಯ ಮುಖಂಡ ಯತ್ನಾಳ್ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ ಎಂದು ನೂತನ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಭಾನುವಾರ ಮೈಸೂರಿನಲ್ಲಿ ರಾಜಕೀಯ ಮುಖಂಡರು ಮತ್ತು ಸ್ವಾಮೀಜಿಗಳನ್ನು ಭೇಟಿ ಮಾಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಅವರು ನೂತನ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಅಸಮಾಧಾನಗೊಂಡಿದ್ದಾರೆ ಎಂಬುದನ್ನು ತಪ್ಪಾಗಿ ಅರ್ಥೈಸಲಾಗಿದೆ. ಅವರ ಅಭಿಪ್ರಾಯವನ್ನ ಹೇಳಲು ಸ್ವತಂತ್ರರಿದ್ದಾರೆ ಎಂದು ವಾದಿಸಿದರು.
ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಅವರವರ ಅಭಿಪ್ರಾಯಗಳು, ಅನಿಸಿಕೆ ಇರುವುದು ಸಹಜ. ಎಲ್ಲರ ಅಭಿಪ್ರಾಯದ ಮೇರೆಗೆ ಕೇಂದ್ರದ ವರಿಷ್ಠರು ತೀರ್ಮಾನ ಮಾಡಿದ್ದಾರೆ. ಯತ್ನಾಳ್ ಜೀ ಕೆಲವು ವೇಳೆ ನೋವಿನಿಂದ ಮಾತನಾಡಿರಬಹುದು. ಕೆಲವು ಸಮಸ್ಯೆಗಳನ್ನು ಹೇಳಿಕೊಂಡಿರಬಹುದು. ಎಲ್ಲವನ್ನು ಹಿರಿಯರು ಕುಳಿತು ಸಮಾಲೋಚನೆ ಮಾಡಿ ಉತ್ತರ ಕಂಡುಕೊಳ್ಳುವರು ಎಂದರು.
ನನಗೀಗ ಸದ್ಯ ರಾಜಕೀಯದ 20- 20 ಮ್ಯಾಚ್ ಆಡುವ ಜವಾಬ್ದಾರಿಯನ್ನ ಪಕ್ಷ ವಹಿಸಿದೆ. ಆ ದೃಷ್ಟಿಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸುತ್ತಿದ್ದೇನೆ. ಇಂದು ನಾನು ರಾಜಕೀಯ ಮಾತನಾಡಲ್ಲ ನಾಳೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತೇನೆ ಎಂದು ಹೇಳಿದರು.
ಶಾಸಕಾಂಗ ಪಕ್ಷದ ನಾಯಕನ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾರ ಸಾಮರ್ಥ್ಯ ಏನೆಂಬುದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನರು ತೀರ್ಮಾನ ಮಾಡುತ್ತಾರೆ. ಅದನ್ನು ಆಡಳಿತ ಪಕ್ಷದವರು, ಬೇರೆ ಯಾರೂ ತೀರ್ಮಾನ ಮಾಡಲ್ಲ ಎಂದು ತಿರುಗೇಟು ನೀಡಿದರು.
ಅದ್ದೂರಿ ಸ್ವಾಗತ
ಮೈಸೂರು ನಗರ ಪ್ರವೇಶದಲ್ಲಿ ಇರುವ ಮೈಸೂರು – ಬೆಂಗಳೂರು ಹೆದ್ದಾರಿಯಲ್ಲಿರುವ ಏಟ್ರಿಯಾ ಹೋಟೆಲ್ ಗೆ ಭೇಟಿ ನೀಡಿದರು. ಈ ವೇಳೆ ಕ್ರೇನ್ ಮೂಲಕ ಹೂವಿನ ಮಳೆಗೆರೆದು ಕಾರ್ಯಕರ್ತರು, ಬೃಹತ್ ಸೇಬಿನ ಹಾರ ಹಾಕಿ, ಬೆಳ್ಳಿ ಗದೆ ನೀಡಿ ಅದ್ಧೂರಿ ಸ್ವಾಗತಿಸಿದರು. ಬಳಿಕ ತೆರೆದ ವಾಹನದಲ್ಲಿ ಮೆರವಣಿಗೆ ಹೊರಟ ಬಿ.ವೈ.ವಿಜಯೇಂದ್ರ. ಸಂಸದ ಪ್ರತಾಪ್ ಸಿಂಹ ಸೇರಿ ಗಣ್ಯರಿಂದ ಸ್ವಾಗತ. ಮಾಜಿ ಶಾಸಕರು, ಸಂಸದ ಪ್ರತಾಪ್ ಸಿಂಹ ಮತ್ತಿತರರರು ಇದ್ದರು.
ಆಶ್ರಮಕ್ಕೆ ಭೇಟಿ
ಮೈಸೂರು ನಂಜನಗೂಡು ಮುಖ್ಯ ರಸ್ತೆಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ವಿಜಯೇಂದ್ರ ಭೇಟಿ ನೀಡಿ, ಸ್ವಾಮಿಗಳ ಆಶೀರ್ವಾದ ಪಡೆದರು. ಅಲ್ಲದೇ ಹಿರಿಯ ಮುಖಂಡರಾದ ಸಂಸದ ಶ್ರೀನಿವಾಸ್ಪ್ರಸಾದ್ ಅವರನ್ನು ಸಹ ಭೇಟಿ ಮಾಡಿ ಮಾತುಕತೆ ನಡೆಸಿದರು.