ರಾಯಚೂರು: ಜಿಲ್ಲೆಯಲ್ಲಿ ಏಮ್ಸ್ ಮಂಜೂರಾತಿಗಾಗಿ ಸುಮಾರು 251 ದಿನದಿಂದ ನಡೆದ ಹೋರಾಟವನ್ನು ಸರ್ಕಾರ ನಿರ್ಲಕ್ಷ ಮಾಡುತ್ತಿದೆ, ಇಂದಿನಿಂದ ನಡೆದ ಉಪವಾಸ ಸತ್ಯಾಗ್ರಹವನ್ನು ನಿರ್ಲಕ್ಷ ಮಾಡಿದರೆ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಾಗುವದು ಎಐಸಿಸಿ ಕಾರ್ಯದರ್ಶಿ ಎನ್ಎಸ್ ಬೋಸರಾಜು ಹೇಳಿದರು.
ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವಂತೆ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ನಿರಂತರವಾಗಿ 251 ದಿನಗಳಿಂದ ನಡೆದ ಹಾಗೂ ಇಂದಿನಿಂದ ಪ್ರಾರಂಭವಾದ ಉಪವಾಸ ಸತ್ಯಾಗ್ರಹ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವಂತೆ ಶೀಘ್ರವೇ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿನ ವೈದ್ಯಕೀಯ ಅವ್ಯವಸ್ತೆಯಿಂದ ಜನ ಸಾಮಾನ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು, ಹೈದ್ರಾಬಾದ್ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಸಂಕಷ್ಟ ಅನುಭವಿಸುವದನ್ನು ನಿತ್ಯ ನೋಡುತ್ತಿದ್ದೇವೆ.
ಜಿಲ್ಲೆಯಲ್ಲಿ ಏಮ್ಸ್ ಸಂಸ್ಥೆ ಸ್ಥಾಪಿಸುವುದರಿಂದ ಹಿಂದುಳಿದ ಹಣೆಪಟ್ಟಿಯನ್ನು ಕಳಚಿ ವಿವಿಧ ಆಯಾಮಗಳಲ್ಲಿ ಅಭಿವೃದ್ಧಿಹೊಂದುತ್ತದೆ. ಹಿಂದುಳಿದ ಜಿಲ್ಲೆಗಳ ವಿದ್ಯಾರ್ಥಿ- ವಿದ್ಯಾರ್ಥಿನಿಯರು ತಮ್ಮ ವೈದ್ಯಕೀಯ ಸ್ನಾತಕೊತ್ತರ ಶಿಕ್ಷಣ ಅದ್ಯಯನ ಮಾಡಲು ಅನುಕೂಲವಾಗಲಿದೆ. ಏಮ್ಸ್ ಸ್ಥಾಪನೆಯಿಂದ ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಜಿಲ್ಲೆಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಅಭಿವೃದ್ಧಿಗಾಗಿ ಏಮ್ಸ ಮಂಜೂರು ಮಾಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹೋರಾಟ ಸಮೀತಿಯ ಬಸವರಾಜ ಕಳಸ, ಮಾಜಿ ನಗರ ಸಭೆ ಸದಸ್ಯ ರುದ್ರಪ್ಪ ಅಂಗಡಿ, ಅಶೋಕಕುಮಾರ್ ಜೈನ್ , ಗುರುರಾಜ್ ಕುಲ್ಕರ್ಣಿ ವಿನಯ ಕುಮಾರ ಸೇರಿದಂತೆ ಇತರರಿದ್ದರು.
ಸರ್ಕಾರದಿಂದ ಪ್ರಾದೇಶಿಕ ಅಸಮತೋಲನೆ:
ಏಮ್ಸ್ ಹೋರಾಟದಲ್ಲಿ ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಭಾಗವಹಿಸಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದುರೀತಿ ಉತ್ತರ ಕರ್ನಾಟಕ ಅಂದರೆ ಹುಬ್ಬಳ್ಳಿ, ಧಾರವಾಡ, ಬೆಳಗಾವಿ. ಕಲ್ಯಾಣ ಕರ್ನಾಟಕ ಎಂದರೆ ಕಲಬುರಗಿ ಎನ್ನುವಂತಾಗಿದೆ. ಪ್ರಾಂತ್ಯವಾರು ಅಸಮತೋಲನ ಮಾಡಿ ರಾಯಚೂರು ಜಿಲ್ಲೆಗೆ ಅಭಿವೃದ್ಧಿ ಪರ ಯೋಜನೆಗಳೂ ಯಾವೂ ನೀಡಿಲ್ಲ. ರಾಜ್ಯದಲ್ಲಿ ಪ್ರಾದೇಶಿಕ ಅಭಿವೃದ್ಧಿಯ ಆಸಮತೋಲನ ನಿವಾರಣೆಗಾಗಿ ನಮ್ಮ ಜಿಲ್ಲೆಗೆ ಏಮ್ಸ್ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.