ಸುದ್ದಿಮೂಲ ವಾರ್ತೆ
ಬೆಂಗಳೂರು,ಸೆ.10: ಕರ್ನಾಟಕ ರಾಜು ಕ್ಷತ್ರೀಯ ಸಮುದಾಯದ ಅಭಿವೃದ್ದಿಗೆ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು *ಎಂದು ಮಾನ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್ ಬೋಸರಾಜು ಹೇಳಿದರು.
ಇಂದು ಬೆಂಗಳೂರಿನಲ್ಲಿ ಕರ್ನಾಟಕ ರಾಜು ಕ್ಷತ್ರೀಯ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. 53 ವರ್ಷಗಳ ಪಕ್ಷ ನಿಷ್ಠೆಗೆ ಹಾಗೂ ಸಾಮಾಜಿಕ ಸೇವೆಯ ಪ್ರತಿಫಲವಾಗಿ ಸಚಿವ ಸ್ಥಾನ ದೊರಕಿದೆ. ರಾಜು ಕ್ಷತ್ರೀಯ ಸಮುದಾಯದ ಜನರು ಹಲವಾರು ಶೈಕ್ಷಣಿಕ, ಕೈಗಾರಿಕಾ ಹಾಗೂ ಸಾಮಾಜಿಕ ಸಂಸ್ಥೆಗಳ ಮೂಲಕ ರಾಜ್ಯದ ಅಭಿವೃದ್ದಿಗೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಈ ಸಮುದಾಯದ ಅಭಿವೃದ್ದಿಗೆ ಸಹಕಾರ ನೀಡಲು ರಾಜ್ಯ ಸರಕಾರ ಬದ್ದವಾಗಿದೆ. ಸಮುದಾಯ ಅಭಿವೃದ್ದಿಗೆ ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡಲು ನಾನು ಸಿದ್ದನಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಒಕ್ಕೂಟದ ಅಧ್ಯಕ್ಷರಾದ ಕೆ. ಶ್ಯಾಮರಾಜು ಮಾತನಾಡಿ ರಾಜು ಕ್ಷತ್ರೀಯ ಸಮುದಾಯದಿಂದ ಕ್ಯಾಬಿನೆಟ್ ಸಚಿವ ಸ್ಥಾನಕ್ಕೇರಿದ ಮೊದಲ ವ್ಯಕ್ತಿ ಎನ್.ಎಸ್ ಬೋಸರಾಜು ಅವರು. ಕಳೆದ ಹಲವಾರು ದಶಕಗಳಿಂದ ಜನಪ್ರತಿನಿಧಿಯಾಗಿ ನಮ್ಮ ಸಮುದಾಯ ಸೇರಿದಂತೆ ಎಲ್ಲಾ ವರ್ಗದ ಜನರ ಅಭಿವೃದ್ದಿಗೆ ಶ್ರಮಿಸಿದ್ದಾರೆ. ಇಂತಹ ಸಾಮಾಜಿಕ ಕಳಕಳಿಯ ಹೊಂದಿರುವ ವ್ಯಕ್ತಿಗಳಿಗೆ ಉತ್ತಮ ಅವಕಾಶ ದೊರೆತಿರುವುದು ಸಂತಸದ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಗೌರವ ಅಧ್ಯಕ್ಷ ರಾದ ಆರ್. ರಾಧಾಕೃಷ್ಣ ರಾಜು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.