ಸುದ್ದಿಮೂಲ ವಾರ್ತೆ
ಬೆಂಗಳೂರು,ಸೆ.30: ಇಂದಿನ ಯುಗದಲ್ಲಿ ಆರೋಗ್ಯ ಸೇವೆಗಳಲ್ಲಿ ದಾದಿಯರ ಕೊಡುಗೆ ಅಪಾರವಾಗಿದೆ. ದಾದಿಯರು ಮಾನವೀಯತೆಯ ನಿಜವಾದ ಸೇವಕರು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ರಾಜಭವನದಲ್ಲಿ ಆಯೋಜಿಸಲಾಗಿದ್ದ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ನೀಡಿ ಗೌರವಿಸಲ್ಪಟ್ಟ ದಾದಿಯರ ಗೌರವಾರ್ಥ ಕಾರ್ಯಕ್ರಮ ಮತ್ತು ಸ್ಮರಣಿಕೆ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆರೋಗ್ಯ ಜಾಗೃತಿಯಿಂದಾಗಿ, ಆರೋಗ್ಯ ಸೇವೆಗಳಲ್ಲಿ ಸುಧಾರಣೆ ಮತ್ತು ಈ ವಲಯದಲ್ಲಿ ಉದ್ಯೋಗಾವಕಾಶಗಳು ಹಿಂದೆಂದಿಗಿಂತಲೂ ಹೆಚ್ಚು ಲಭ್ಯವಾಗುತ್ತಿವೆ. ಆರೋಗ್ಯ ಕ್ಷೇತ್ರದಲ್ಲಿ ನರ್ಸಿಂಗ್ ಅತ್ಯುತ್ತಮ ವೃತ್ತಿಯಾಗಿದೆ. ಮತ್ತು ಆರೋಗ್ಯ ಕ್ಷೇತ್ರದ ಸುಗಮ ಕಾರ್ಯನಿರ್ವಹಣೆಯಲ್ಲಿ ದಾದಿಯರು ಪ್ರಮುಖ ಪಾತ್ರ ವಹಿಸುತ್ತಾರೆ. ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಆರೋಗ್ಯ ಕ್ಷೇತ್ರದಲ್ಲಿ ಪರಿಣಿತ ಮತ್ತು ತರಬೇತಿ ಪಡೆದ ದಾದಿಯರ ಅವಶ್ಯಕತೆ ಬಹಳಷ್ಟಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನೆರೆದಿದ್ದ ವಿವಿಧ ಜಿಲ್ಲೆಗಳ ಶುಶ್ರೂಕರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಿದರು. ಈ ಕುರಿತು ಪ್ರತಿಕ್ರಯಿಸಿದ ರಾಜ್ಯಪಾಲರು, ಲಿಖಿತ ರೂಪದಲ್ಲಿ ಮನವಿಯನ್ನು ಸಲ್ಲಿಸುವಂತೆ ಸೂಚಿಸಿ, ಮನವಿಗಳ ಕುರಿತು ಸರ್ಕಾರದಲ್ಲಿ ಚರ್ಚಿಸಿ, ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ. ರಮೇಶ್, ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ ರಿಜಿಸ್ಟ್ರಾರ್ ಮಲ್ಲು , ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ವೀಣಾ ಎಸ್. ಪರಮಣವರ್, ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಸಮಿತಿಯ ಅಧ್ಯಕ್ಷ ಇವಾನ್ ನಿಗ್ಲಿ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.