ಸುದ್ದಿಮೂಲ ವಾರ್ತೆ
ಹೊಸಕೋಟೆ, ನ. 29 : ತಾಲೂಕಿನ ನಾನಾ ಕಡೆ ಅಕ್ರಮ ಮಧ್ಯ ಮಾರಾಟ ದಂಧೆ ರಾಜಾರೋಷವಾಗಿ ಎಗ್ಗಿಲ್ಲದೆ ನಡೆಯುತ್ತಿದೆ.
ಆದರೂ ಸಹ ಅಬಕಾರಿ ಇಲಾಖೆ ಈ ದಂಧೆಗೆ ಕಡಿವಾಣ ಹಾಕದೇ ನಿದ್ರೆಗೆ ಜಾರಿರುವ ಹಾಗೆ ಕಾಣಿಸುತ್ತಿದೆ.
ತಾಲೂಕಿನ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ರಾಜಾರೋಷವಾಗಿ ದಿನದ 24 ಗಂಟೆಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿದೆ. ಅಬಕಾರಿ ಇಲಾಖೆ ನೀಡಿರುವ ನಿಯಮಗಳನ್ನು ಗಾಳಿಗೆ ತೂರಿ ತಮ್ಮ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ.
ಇದರಿಂದ ಅಕ್ಕಪಕ್ಕದಲ್ಲಿ ಇರುವ ಅಂಗಡಿಗಳಿಗೂ ಮತ್ತು ಮನೆಗಳಿಗೂ ತುಂಬಾ ತೊಂದರೆಯಾಗುತ್ತಿದೆ.
ಪರವಾನಗಿ ಪಡೆದ ಕೆಲ ಬಾರ್ಗಳು ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ನಾಯಿಕೊಡೆಯಂತೆ ತಲೆ ಎತ್ತಿರುವ ಅಕ್ರಮ ಮದ್ಯ ಅಂಗಡಿಗಳಿಗೆ ಮದ್ಯವನ್ನು ಸರಬರಾಜು ಮಾಡುತ್ತಿದ್ದು, ಅಬಕಾರಿ ಇಲಾಖೆಯ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕೈಗೊಳ್ಳದೇ ಮೌನವಾಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಅಕ್ರಮ ಮದ್ಯ ದಂಧೆ ಸರಾಗವಾಗಿ ನಡೆಯುತ್ತಿದೆ. ಕೆಲವು ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗದೆ ಬೆಳಗ್ಗೆ ಮದ್ಯ ಸೇವಿಸಿ ರಸ್ತೆ ಬದಿಗಳಲ್ಲಿ ಬಿದ್ದಿರುತ್ತಾರೆ. ಅನೇಕರು ರೋಗ ಪೀಡಿತರಾಗಿ ಆಸ್ಪತ್ರೆ ಸೇರಿ ಸಾವನ್ನು ಅಪ್ಪಿದ ಅನೇಕ ಉದಾಹಣೆಗಳಿವೆ. ಇದರಿಂದ ಹೊಸಕೋಟೆ ತಾಲೂಕಿನಾದ್ಯಂತ ೧೪ ವೈನ್ ಶಾಪ್ಗಳು,18ಕ್ಕೂ ಹೆಚ್ಚು ಬಾರ್ ಮತ್ತು ರೆಸ್ಟೋರೆಂಟ್ಗಳು, 12 ಲಾಡ್ಜಿಂಗ್ ಬಾರ್ ಶಾಪ್,
3 ಎಂಎಸ್ಐಎಲ್ ಗಳು ಒಳಗೊಂಡಂತೆ 2 ಪಬ್ ಹೊಂದಿರುವ ಒಟ್ಟು 52 ಮದ್ಯದ ಅಂಗಡಿಗಳು ಪರವಾನಿಗೆ ಪಡೆದುಕೊಂಡಿವೆ. ಆದರೆ, ಪರವಾನಗಿ ಇಲ್ಲದೇ ಅನೇಕ ಡಾಬಾ, ಕಿರಾಣಿ ಅಂಗಡಿ, ಮನೆಗಳು, ಚಿಲ್ಲರೆ ಅಂಗಡಿಗಳಲ್ಲಿ ಮದ್ಯದ ಬಾಟಲ್ ಮಾರಾಟ ಮಾಡಲಾಗುತ್ತಿದೆ. ಪ್ರತಿ ಹಳ್ಳಿಗಳಲ್ಲಿ ಏನಿಲ್ಲ ಅಂದರೂ ಅಕ್ರಮ ಮದ್ಯದ ಅಂಗಡಿಗಳು ತಲೆ ಎತ್ತಿಕೊಂಡಿವೆ.
ಚಿಲ್ಲರೆ ಅಂಗಡಿ, ಮನೆಗಳಲ್ಲಿ ಮಾರಾಟ :
ಪ್ರತಿಯೊಂದು ಚಿಲ್ಲರೆ ಅಂಗಡಿ, ದಿನಸಿ ಅಂಗಡಿ ರಸ್ತೆ ಬದಿಯ ಡಬ್ಬ ಅಂಗಡಿಗಳಲ್ಲಿ, ನಿರ್ಜನ ಪ್ರದೇಶದಲ್ಲಿ ಚೀಲಗಳಲ್ಲಿ, ಮನೆಗಳಲ್ಲಿ ಮದ್ಯ ಮಾರಾಟವನ್ನು ರಾಜಾರೋಷವಾಗಿ ಮಾರುತ್ತಿದ್ದಾರೆ.
ಇದರಿಂದ ದಿನಸಿ ಖರೀದಿಸಲು ಹೋಗುವ ಮಹಿಳೆಯರು ಸಹ ಗುಟ್ಟಾಗಿ ಮದ್ಯವನ್ನ ತೆಗೆದುಕೊಂಡು ಹೋಗುವುದು ಸಹಜವಾಗಿದೆ. ಕೆಲ ಮದ್ಯದ ಅಂಗಡಿಗಳಿಂದ ಚೀಪ್ ಲಿಕ್ಕರ್ ಖರೀದಿಸಿ ಹೋಟೆಲ್ಗಳಲ್ಲಿ, ಮನೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ.
ಕಾಟಾಚಾರಕ್ಕೆ ದಾಳಿ : ಹೆದ್ದಾರಿ ಪಕ್ಕದಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ
ಅಕ್ರಮ ಮದ್ಯ ಮಾರಾಟ ಖರೀದಿಗೆ ಮುಗಿ ಬೀಳುವುದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಇನ್ನೂ ಅಧಿಕಾರಿಗಳು ಕಾಟಾಚಾರಕ್ಕೆ ಎಂಬಂತೆ ಅಲ್ಲಲ್ಲಿ ದಾಳಿ ಮಾಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ವರ್ಷಕ್ಕೆ ಕೇವಲ ಬೆರಳೆಣಿಕೆಯಷ್ಟು ಪ್ರಕರಣಗಳು ಮಾತ್ರ ದಾಖಲಾಗಿದೆ.
ದಾಳಿ ನಡೆಸದ ಅಧಿಕಾರಿಗಳು : ಕೆಲ ಸಂಘದ ಸದಸ್ಯರು ಮತ್ತು ಪ್ರಗತಿಪರ ಸಂಘಟನೆಗಳು ಮದ್ಯ ಅಂಗಡಿಗಳು ತೆರವುಗೊಳಿಸುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದರು.
ಅಬಕಾರಿ ಇಲಾಖೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಅಂಗಡಿಗಳು ನಾಯಿಕೊಡೆಯಂತೆ ತಲೆ ಎತ್ತುತ್ತಿದ್ದರೂ ನೆಪ ಮಾತ್ರಕ್ಕೆ ಕೆಲವು ಕಡೆ ದಾಳಿ ನಡೆಸಿ, ಅವರಿಂದ ಹಣ ಪಡೆದು ಸುಮ್ಮನಾಗುತ್ತಾರೆ. ಅಧಿಕಾರಿಗಳು ಮಾತ್ರ ಬಾರ್ ಮಾಲೀಕರಿಂದ ತಮಗೆ ಬರುವ ಮಾಮೂಲಿ ಪಡೆದು ಸುಮ್ಮನಾಗುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ನಾನು ಬಂದು ಒಂದು ತಿಂಗಳು ಮಾತ್ರ ಆಗಿದೆ. ದೇವನಹಳ್ಳಿ ಮತ್ತು ಹೊಸಕೋಟೆ ಎರಡೂ
ಕಡೆಗಳಲ್ಲಿ ನೋಡಿಕೊಳ್ಳುತ್ತಿದ್ದೇನೆ. ನನ್ನ ಅವಧಿಯಲ್ಲಿ 10-12 ಪ್ರಕರಣ ದಾಖಲಿಸಲಾಗಿದೆ. ಹಳ್ಳಿಗಳಲ್ಲಿ ಮದ್ಯ ಮಾರಾಟ ಮಾಡುವುದು ಸರ್ವೇ ಸಾಮಾನ್ಯ. ಗ್ರಾ.ಪಂ. ಸದಸ್ಯರೇ ಮಾರಾಟ ಮಾಡುವ ಸ್ಥಿತಿ ಎದುರಾಗಿದೆ. ಜನರ ಸಹಕಾರದೊಂದಿಗೆ ಅಕ್ರಮ ಮದ್ಯ ಮಾರಾಟ ಮಾಡುವ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದು.
– ಸುನೀಲ್, ಸಿಪಿಐ, ಅಬಕಾರಿ ಇಲಾಖೆ, ಹೊಸಕೋಟೆ
ರಸ್ತೆ ಪಕ್ಕದಲ್ಲಿರುವ ಚಿಲ್ಲರೆ ಅಂಗಡಿಗಳಲ್ಲಿ ರಾಜಾರೋಷವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಈಗಾಗಲೇ ಅನೇಕರು ನಕಲಿ ಮದ್ಯ ಸೇವಿಸಿ ಮೃತ ಪಟ್ಟಿದ್ದಾರೆ.
ಈಸಮಸ್ಯೆ ಪರಿಹರಿಸಲು ಜನ ಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗಬೇಕು. ಇಲ್ಲವಾದಲ್ಲಿ ಕೂಲಿ ಮಾಡಿ ಸಂಪಾದನೆ ಮಾಡುವ ಹಣವೆಲ್ಲಾ ಮದ್ಯಕ್ಕೆ ಸುರಿಯಬೇಕಾಗುತ್ತದೆ. ಇದರಿಂದ ಕುಟುಂಬಗಳು ಬೀದಿ ಪಾಲಾಗುತ್ತವೆ. ಪ್ರೇಮ, ಸ್ಥಳೀಯ ನಿವಾಸಿ