ಸುದ್ದಿಮೂಲ ವಾರ್ತೆ
ಹಾಸನ ನ.7:ಬಹಳ ಹಿಂದಿನಿಂದಲೂ ಜಾತ್ಯಾತೀತ ತತ್ವ, ಸಿದ್ದಾಂತಗಳ ಬಗ್ಗೆ ಬದ್ದತೆ ಇದೆ ಎಂದು ಹೇಳುತ್ತಿದ್ದ ಜೆಡಿಎಸ್ , ಯಾವಾಗ ಬೆಂಗಳೂರಿನಲ್ಲಿ ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿ ಅವರ ಸಮ್ಮುಖದಲ್ಲಿ ನಡೆದ ಬಿಜೆಪಿಯೇತರ ಪಕ್ಷಗಳ ʻಇಂಡಿಯಾʼ ಸಮಾವೇಶದಲ್ಲಿ ಆಹ್ವಾನ ನೀಡಲಿಲ್ಲವೋ ಆಗ ಎನ್ಡಿಎ ಒಕ್ಕೂಟ ಸೇರಿತು. ತದನಂತರ ಜೆಡಿಎಸ್ ಶಾಸಕರು, ಮಾಜಿ ಶಾಸಕರು ಮತ್ತಿತರ ಮುಖಂಡರಿಗೆ ಕಾಂಗ್ರೆಸ್ ಗಾಳ ಆಸೆ, ಆಮಿಷವೊಡ್ಡಿ ಗಾಳ ಹಾಕುತ್ತಿದೆ. ಇದನ್ನು ಹಾಲಿ ಸಿಎಂ ಮತ್ತು ಡಿಸಿಎಂ ತೆರೆಮರೆಯಲ್ಲಿ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು, ಇದಕ್ಕೆ ಪೂರಕ ಎಂಬಂತೆ ಶಿವಮೊಗ್ಗದ ಜೆಡಿಎಸ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಮತ್ತು ಅವರ ಬೆಂಬಲಿಗರು ಕಾಂಗ್ರೆಸ್ ಸೇರಿದರು.
ಹೀಗೆ ಜೆಡಿಎಸ್ನ ಹಲವರು ಮುಂದೆ ಕಾಂಗ್ರೆಸ್ ಸೇರುತ್ತಾರೆ ಎಂಬ ಆತಂಕ ಜೆಡಿಎಸ್ ಮುಖಂಡರನ್ನು ಕಾಡಿದ್ದನ್ನು ತಳ್ಳಿ ಹಾಕುವಂತಿಲ್ಲ. ಈ ಹಿನ್ನೆಲೆಯಲ್ಲಿಯೇ ಇರಬೇಕು ಜೆಡಿಎಸ್ ಈಗ ಒಗ್ಗಟ್ಟಿನ ಸಂದೇಶವನ್ನುರವಾನಿಸಲು ಮುಂದಾಗಿದೆ. ಇದು ಮುಂದೆ ಬರುವ ಲೋಕಸಭೆ ಚುನಾವಣೆಯ ದೃಷ್ಟಿಯಿಂದಲೂ ಅನಿವಾರ್ಯವಾಗಿತ್ತು ಕೂಡ ಎಂಬುದನ್ನು ಆ ಪಕ್ಷದವರೇ ಒಪ್ಪುತ್ತಾರೆ.
ಸಿಎಂ ಬರುವ ದಿನವೇ ಆಗಮನ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹಾಸನಕ್ಕೆ ಬಂದು ಹಾಸನಾಂಬೆ ದರ್ಶನ ಮಾಡಲು ಆಗಮಿಸಿದ್ದರು. ಅಂದೇ ಮಾಜಿ ಸಿಎಂ ನೇತೃತ್ವದಲ್ಲಿ ಜೆಡಿಎಸ್ 19 ಶಾಸಕರು ಬಂದು ಹಾಸನಾಂಬೆ ದರ್ಶನ ಪಡೆದು, ಹಾಸನ ನಗರದ ಹೊರವಲಯದಲ್ಲಿ ಇರುವ ʻ ಹೊಯ್ಸಳʼ ರೆಸಾರ್ಟ್ನಲ್ಲಿ ವಾಸ್ತವ್ಯ ಮಾಡಿ, ರಾಜಕೀಯ ಆಗುಹೋಗುಗಳ ಬಗ್ಗೆ ಅವಲೋಕನ ಮಾಡಿ, ಪಕ್ಷ ಸಂಘಟನೆ ಜತೆ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಉತ್ತಮ ಫಲಿತಾಂಶ ಬರುವ ನಿಟ್ಟಿನಲ್ಲಿ ವಿಚಾರ ವಿನಿಮಯ ನಡೆಸಲಾಗಿದೆ.
ಇದೇ ವೇಳೆ ಸಭೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಪಕ್ಷ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರುವುದನ್ನು ಯಾರು ತಪ್ಪಿಸಲಾಗುವುದು. ಕಾಂಗ್ರೆಸ್ ಗ್ಯಾರಂಟಿಗಳಿಂದ ಮತ ಪಡೆಯಲು ಆಗದ ಸ್ಥಿತಿ ನಿರ್ಮಾನ ಆಗುತ್ತಿದೆ. ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡಲಾಗದಷ್ಟು ರಾಜ್ಯದ ಹಣಕಾಸು ತೀವವಾಗಿ ಹದಗೆಡುತ್ತಿದೆ. ಆದ್ದರಿಂದ ಮುಖಂಡರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡರೆ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಧೈರ್ಯ, ಸ್ಫೂರ್ತಿ ತುಂಬಿದರು ಎಂದು ಬಲ್ಲ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಸಂಸದ ಪ್ರಜ್ವಲ್ ರೇವಣ್ಣ, ಶಾಸಕರಾದ ಎಚ್.ಡಿ.ರೇವಣ್ಣ, ಹನೂರು ಮಂಜನಾಥ್, ಸುರೇಶ್, ಜಿ.ಡಿ.ಹರೀಶ್ಗೌಡ, ಎಂ.ಟಿ. ಕೃಷ್ಣಪ್ಪ, ಸ್ವರೂಪ್ ಪ್ರಕಾಶ್, ಸಮೃದ್ಧಿ ಮಂಜುನಾಥ್, ನೇಮಿ ರಾಜನಾಯಕ, ಗೋವಿಂದರಾಜು, ಕೆ.ಎ. ತಿಪ್ಪೇಸ್ವಾಮಿ, ಭೋಜೇಗೌಡ, ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ ಸೇರಿದಂತೆ ಬಹುತೇಕ ಮಂದಿ ಹಾಜರಾಗಿದ್ದರು.
ಒಗ್ಗಟ್ಟಿನ ಸಂದೇಶ ರವಾನಿಸಲೆಂದೇ
ಹೌದು, ಪಕ್ಕದ ಒಗ್ಗಟ್ಟಿನ ಸಂದೇಶವನ್ನು ರವಾನಿಸಲು ಶಾಸಕರು, ಮುಖಂಡರ ಸಭೆ ಕರೆಯಲಾಗಿದೆ. ಇದರಲ್ಲಿ ಮುಚ್ಚುಮರೆ ಇಲ್ಲ. ಇದರಲ್ಲಿ ಶಾಸಕರ ಮನಸು ಗಟ್ಟಿ ಮಾಡುವುದು ಸೇರಿದೆ.ಬರ ಬಗ್ಗೆಯೂ ಸುದೀರ್ಘ ಚರ್ಚೆ ಮಾಡಲಾಗಿದೆ. ಹಾಸನ ನೆಲದ ಮಣ್ಣು ದೇವೇಗೌಡರ ದೆಹಲಿಯವರೆಗೆ ಬೆಳೆಸಿದೆ. ಸಭೆ ಮೂಲಕ ನಮ್ಮನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬುದನ್ನೂ ಮನವರಿಕೆ ಮಾಡಿಕೊಡಲಾಗುವುದು. ವಿಶೇಷತೆ ಮತ್ತು ಧಾರ್ಮಿಕ ಇತಿಹಾಸ ಹೊಂದಿರುಬ ಹಾಸನಾಂಬೆ ಮಡಿಲಲ್ಲಿ ಉತ್ತಮ ಮನಸಿನಿಂದ ಸೇರಿದ್ದೇವೆ. ಎಂದು ಹೇಳುತ್ತಾರೆ ಮಾಜಿ ಸಿಎಂ ಕುಮಾರಸ್ವಾಮಿ.
ದೀಪಾವಳಿ ನಾಡಿನ ಜನತೆಯ ಬದುಕನ್ನು ಬೆಳಗಲಿ. ನಾಡು ಸಮೃದ್ದಿಯಾಗಲಿ. ಅನ್ನ ನೀಡುವ ರೈತರ ಬದುಕ ಹಸನಾಗಲಿ. ಎಲ್ಲರ ಹೃದಯ ತೆರೆಸಲಿ ಎಂದು ಎಲ್ಲಾ ಶಾಸಕರು ಹಾಸನಾಂಬೆಯಲ್ಲಿ ಪ್ರಾರ್ಥಿಸಿದ್ದಾರೆ ಎಂದು ಹೇಳಿದರು.
ಶಕ್ತಿಯುತ ದೇವತೆ ಹಾಸನಾಂಬೆ ದರ್ಶನ ಪಡೆದು. ಆಕೆಯ ಮಡಿಲಲ್ಲಿ ಒಗ್ಗಟ್ಟಿನ ಮಂತ್ರ ಪಠಿಸಿದ್ದೇವೆ. ಪಕ್ಷ ಸಂಘಟನೆ ಮತ್ತು ಲೋಕಸಭೆ ಚುನಾವಣೆ ಬಗ್ಗೆ ಚರ್ಚಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜನರ ಜ್ವಲಂತ ಸಮಸ್ಯೆಗಳನ್ನು ಕೈಗೆತ್ತಿ ಹೋರಾಟ ಮಾಡಲಾಗುವುದು. ಪಕ್ಷ ಶಕ್ತಿಯುತವಾಗಿ ಬೆಳೆಯುತ್ತದೆ. ಅಧಿಕಾರಕ್ಕೆ ಬರುತ್ತದೆ.
-ಜಿ.ಟಿ.ದೇವೇಗೌಡ. ಅಧ್ಯಕ್ಷರು, ಜೆಡೆಎಸ್ ಕೋರ್ ಕಮಿಟಿ.