ಸುದ್ದಿಮೂಲ ವಾರ್ತೆ
ಮೈಸೂರು, ಜು.27 : ಶತಮಾನಗಳ ಇತಿಹಾಸ ಹೊಂದಿರುವ ಮೈಸೂರು ವಿಶ್ವವಿದ್ಯಾಲಯದ ಘನತೆ ಚ್ಯುತಿ ಆಗುವುದು ಮುಂದುವರಿದಿದೆ. ಕುಲಪತಿಗಳಿಲ್ಲದೇ ಎಲ್ಲಾ ಬಗೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಹಿನ್ನೆಡೆಯಾಗಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಮುಸುಕಾಗುತ್ತಿದೆ. ಇದು ಶೈಕ್ಷಣಿಕ ದುರಂತವೇ ಎಂಬ ಅಸಮಾಧಾನ ವ್ಯಕ್ತವಾಗುತ್ತಿದೆ.
ಮೈಸೂರು ವಿಶ್ವವಿದ್ಯಾಲಯದ 108 ನೇ ಸಂಸ್ಥಾಪನಾ ದಿನಾಚರಣೆಯನ್ನು ಕ್ರಾಫರ್ಡ್ ಹಾಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಅವ್ಯವಸ್ಥೆ ನಡುವೆ ಗುರುವಾರ ವಿವಿಯ ಕುಲಪತಿಗಳಿಲ್ಲದೆ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿದ್ದ ಆಂದ್ರಪ್ರದೇಶದ ಗುಂಟೂರಿನ ವಿಜ್ಞಾನ ವಿವಿ ಕುಲಪತಿ ಪ್ರೊ.ಪಿ ನಾಗಭೂಷಣ್ ಭಾಗಿಯಾಗಿದ್ದರು ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರಕ್ಕೆ ಪುಷಪಾರ್ಚನೆ ಸಲ್ಲಿಸಿ ಜ್ಯೋತಿ ಬೆಳಗುವ ಮೂಲಕ ಪ್ರೊ. ಪಿ.ನಾಗರಾಜು ಕಾರ್ಯಕ್ರಮ ಉದ್ಘಾಟಿಸಿದರು.
ಕುಲಪತಿಗಳಿಲ್ಲದೆ ನಡೆಯುತ್ತಿರುವ ಸಂಸ್ಥಾಪನಾ ದಿನಾಚರಣೆಯಲ್ಲಿ ಯಾವುದೇ ಸಡಗರ ಸಂಭ್ರಮದ ವಾತಾವರಣ ಕಂಡು ಬರಲಿಲ್ಲ. ಈಗಾಗಲೇ ಕುಲಪತಿಗಳಿಲ್ಲದೆ ವಿವಿಯ 104 ನೇ ಘಟಿಕೋತ್ಸವ ನೆದೆಗುಂಡಿಗೆ ಬಿದ್ದಿದೆ. ಕಳೆದ ಸಾಲಿನಲ್ಲಿ ಪದವಿ ಪಡೆದಿದ್ದ ವಿದ್ಯಾರ್ಥಿಗಳಿಗೆ ಇನ್ನೂ ಪದವಿ ಪ್ರಧಾನವಾಗದೆ ಘಟಿಕೋತ್ಸವಕ್ಕಾಗಿ ಕಾಯುತ್ತಿದ್ದಾರೆ.
ಕುಲಪತಿ ಇಲ್ಲದ ಕಾರಣ ಹಣಕಾಸು ಸೌಲಭ್ಯ ಸಿಗದೆ ನಿವೃತ್ತಿ ಹೊಂದಿದ ಬೋಧಕ – ಬೋಧಕೇತರ ಸಿಬ್ಬಂದಿಗಳ ಪರದಾಟ ಮುಂದುವರಿದಿದ್ದರೇ, ರಾಜ್ಯಪಾಲರ ನಿರ್ದೇಶನದ ಪ್ರಕಾರ ಹಣಕಾಸು ವ್ಯವಹಾರಗಳನ್ನು ಹಣಕಾಸು ಅಧಿಕಾರಿ ನಿರ್ವಹಿಸುತ್ತಿಸುತ್ತಿದ್ದಾರೆ. ಆಡಳಿತಾತ್ಮಕ ಅಧಿಕಾರದ ಕಾರ್ಯವನ್ನು ವಿವಿಯ ರಿಜಿಸ್ಟರ್ ನಿರ್ವಹಿಸುತ್ತಿದ್ದಾರೆ.
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ 2000 ಕಾಲಂ 14 ನೇ ಪ್ರಕಾರ ಉಪ ಕುಲಪತಿಗಳ ಹುದ್ದೆ ಖಾಲಿ ಇದ್ದಾಗ ಹಂಗಾಮಿ ಉಪ ಕುಲಪತಿಗಳಾಗಿ ಸಂಬಂಧಪಟ್ಟ ವಿಶ್ವವಿದ್ಯಾನಿಲಯಗಳ ಡಿನ್ ಅವರನ್ನು ನೇಮಕ ಮಾಡಬೇಕು. ಅದನ್ನು ಮಾಡುತ್ತಿಲ್ಲ.ವಿಶ್ವ ವಿದ್ಯಾನಿಲಯದ ಕಾಯ್ದೆ ಪ್ರಕಾರ ಹಂಗಾಮಿ ಅಥವಾ ಖಾಯಂ ಉಪ ಕುಲಪತಿಗಳು ಅನುಪಸ್ತಿಯಲ್ಲಿ ಯಾವುದೇ ನಿರ್ಧಾರಗಳನ್ನು ಎಫ್ ಓ ಅಥವಾ ಕುಲಸಚಿವರು ತೆಗೆದುಕೊಳ್ಳುವಂತಿಲ್ಲ.
ಇಷ್ಟೆಲ್ಲಾ ಸಮಸ್ಯೆಗಳಾಗುತ್ತಿದ್ದರೂ ರಾಜ್ಯಪಾಲರು ಏಕೆ ಮೌನವಹಿಸಿದ್ದಾರೆ ? ಈ ಬಗ್ಗೆ ಯಾಕೆ ಸರ್ಕಾರ ಇನ್ನೂ ಕುಲಪತಿ ನೇಮಕ ವಿಚಾರದಲ್ಲಿ ಜಾಣ ಮೌನ ತಾಳಿದೆ. ರಾಜ್ಯದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರ ತವರು ಜಿಲ್ಲೆಯ ವಿವಿಯಲ್ಲಿ ಕುಲಪತಿಗಳಿಲ್ಲದೆ ಇರುವುದು ನಿಜಕ್ಕೂ ಯಜಮಾನನಿಲ್ಲದ ಮನೆಯಂತೆ ಆಗಿ, ವಿದ್ಯಾರ್ಥಿಗಳ ಭವಿಷ್ಯವನ್ನು ಮುರುಟಿ ಹಾಕಲಾಗುತ್ತಿದೆ.