ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.04: ಜನಮೆಚ್ಚುಗೆ ವಿಚಾರದಲ್ಲಿ ಬಿಜೆಪಿ ಅತ್ಯಂತ ಮುಂದಿದೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರ ರಚನೆ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ಕುಮಾರ್ ಕಟೀಲ್ ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ವಿಜಯನಗರ ಜಿಲ್ಲೆ ಮತ್ತು ಬೆಂಗಳೂರಿನ ಹಲವು ಪ್ರಮುಖರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಮತ್ತು ಇತರರ ಪಕ್ಷ ಸೇರ್ಪಡೆಯಿಂದ ನಮಗೆ ಭೀಮಬಲ ಬಂದಿದೆ ಎಂದು ತಿಳಿಸಿದರು. ವಿಜಯನಗರ ಜಿಲ್ಲೆ ಮಾತ್ರವಲ್ಲದೆ, ಅಪ್ಪಾಜಿಗೌಡರ ಮೂಲಕ ಹಳೆಮೈಸೂರು ಭಾಗದಲ್ಲಿ ಪಕ್ಷದ ಬಲ ವೃದ್ಧಿಯಾಗಿದೆ ಎಂದು ತಿಳಿಸಿದರು.
ಬಿಜೆಪಿ ಸಿದ್ಧಾಂತ- ವಿಚಾರಧಾರೆಯನ್ನು ಒಪ್ಪಿ ಹತ್ತಾರು ಜನರು ಪಕ್ಷ ಸೇರುತ್ತಿದ್ದಾರೆ. ನರೇಂದ್ರ ಮೋದಿ ಆಡಳಿತ, ಯಡಿಯೂರಪ್ಪ ಮಾರ್ಗದರ್ಶನದಡಿ ಬಸವರಾಜ ಬೊಮ್ಮಾಯಿಯವರ ಆಡಳಿತವನ್ನು ಮೆಚ್ಚಿಕೊಂಡು ಸಾವಿರಾರು ಜನರು ಬಿಜೆಪಿ ಸೇರುವ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ನುಡಿದರು.
ಚುನಾವಣೆ ಬಿಸಿ ಏರುತ್ತಿದೆ. ಅದರ ನಡುವೆ ಕಲ್ಯಾಣ ಸಮೃದ್ಧಿಯ ಕರ್ನಾಟಕಕ್ಕಾಗಿ ಬಿಜೆಪಿ ಸೇರಲು ಹಲವರು ಉತ್ಸುಕರಾಗಿದ್ದಾರೆ ಬಿಜೆಪಿಯೇ ಭರವಸೆ ಎಂಬ ಚಿಂತನೆಯ ಜೊತೆ ನೂರಾರು ಜನರು ಪಕ್ಷ ಸೇರುತ್ತಿದ್ದಾರೆ ಎಂದರು.
ಪಕ್ಷ ಸೇರಿದ ಎಲ್ಲರಿಗೂ ಅವರವರ ಸ್ಥಾನಮಾನಕ್ಕೆ ಚ್ಯುತಿ ಆಗದಂತೆ ನೋಡಿಕೊಳ್ಳಲಾಗುವುದು. ಕಾರ್ಯಕರ್ತರಾಗಿ ಪಕ್ಷದ ಕಾರ್ಯ ಮಾಡಬೇಕು. ಪಾರ್ಟಿ ಬೆಳೆಸಿ ಗಟ್ಟಿ ಮಾಡಲು ಸಮಯ ವಿನಿಯೋಗಿಸಿ ಎಂದು ಕಿವಿಮಾತು ಹೇಳಿದರು.
ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಪ್ರಮುಖರಾದ ಕೃಷ್ಣ ನಾಯ್ಕ, ಪರಮೇಶ್ವರಪ್ಪ, ಎನ್. ಕೋಟೆಪ್ಪ, ಬೆಂಗಳೂರಿನ ಖ್ಯಾತ ನೇತ್ರ ತಜ್ಞ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಡಾ. ಅಪ್ಪಾಜಿ ಗೌಡ ಅವರು ಪಕ್ಷ ಸೇರಿದ್ದಾರೆ ಇವರನ್ನು ಹೃದಯಪೂರ್ವಕವಾಗಿ ಪಕ್ಷಕ್ಕೆ ಸ್ವಾಗತಿಸುವುದಾಗಿ ತಿಳಿಸಿದರು.
ರಾಜ್ಯದ ಸಚಿವ ಶ್ರೀರಾಮುಲು ಮಾತನಾಡಿ, ಬಿಜೆಪಿ ಸೇರಿದ ಎಲ್ಲರಿಗೂ ಸ್ವಾಗತ ಮತ್ತು ಅಭಿನಂದನೆಗಳು ಎಂದು ತಿಳಿಸಿದರು. ನಂದಿಹಳ್ಳಿ ಹಾಲಪ್ಪ ಅವರು 2009ರಲ್ಲಿ ನಮ್ಮ ಜೊತೆಗಿದ್ದವರು ಅವಳಿ ಜಿಲ್ಲೆಯಲ್ಲಿ 10ಕ್ಕೆ ಹತ್ತೂ ಸ್ಥಾನ ಗೆಲ್ಲಲು ಅವರ ಸೇರ್ಪಡೆ ಸಹಕಾರಿ ಎಂದು ನುಡಿದರು.
ಲೋಕಸಭಾ ಸದಸ್ಯ ದೇವೇಂದ್ರಪ್ಪ, ಸ್ಥಳೀಯ ಪ್ರಮುಖರು ಇದ್ದರು. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಬ್ಲಾಕ್ ಕಾಂಗ್ರೆಸ್ನ ಅಧ್ಯಕ್ಷ ಪರಮೇಶ್ವರಪ್ಪ, ವಾಲ್ಮೀಕಿ ಸಮಾಜದ ಮುಖಂಡ ಎನ್. ಕೋಟೆಪ್ಪ, ರಾಜ್ಯ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಕೃಷ್ಣ ನಾಯ್ಕ, ಬೆಂಗಳೂರಿನ ಖ್ಯಾತ ನೇತ್ರ ತಜ್ಞ ಡಾ. ಅಪ್ಪಾಜಿ ಗೌಡ ಮತ್ತು ಹಲವು ಮುಖಂಡರು ತಮ್ಮ ಬೆಂಬಲಿಗರ ಜೊತೆ ಪಕ್ಷ ಸೇರಿದರು.