ಸುದ್ದಿಮೂಲ ವಾರ್ತೆ
ಮೈಸೂರು,ಅ:14: ಅಂತಾರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ, ಮೈಸೂರಿನ ನಿವಾಸಿ, ಪದ್ಮಶ್ರೀ ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ಅರಮನೆ ಆವರಣದಲ್ಲಿ ನಡೆಯುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ನೀಡಲು ಅಧಿಕಾರಿಗಳು ಅವರಿಂದ ಕಮೀಷನ್ ಕೇಳಿದ ಆರೋಪ ಕೇಳಿ ಬಂದಿದ್ದು. ಈ ಬಗ್ಗೆ ಸಾರ್ವಜನಿಕವಾಗಿ ತೀವ್ರ ಆಕ್ರೋಶ ವ್ಕಕ್ತವಾಗಿದೆ.
91 ವರ್ಷ ವಯಸ್ಸಿನ ಸರೋದ್ ಮಾಂತ್ರಿಕ ಪಂಡಿತ್ ರಾಜೀವ್ ತಾರಾನಾಥ್ ಅವರೇ ಈ ಆರೋಪ ಮಾಡಿದ್ದಾರೆ. ದಸರಾ ಉತ್ಸವದಲ್ಲಿ ತಮಗೆ ನೀಡುವ ಸಂಭಾವನೆಯಲ್ಲಿ ಮೂರು ಲಕ್ಷ ರೂಪಾಯಿ ಕಮೀಷನ್ ಕೇಳಲಾಯಿತು. ಹೀಗೆ ಕಮೀಷನ್ ಕೇಳಿದವರಿಗೆ ಛೀಮಾರಿ ಹಾಕಿದ್ದೇನೆ. ಕಾರ್ಯಕ್ರಮ ನೀಡದಿದ್ದರು ಪರವಾಗಿಲ್ಲ. ಇಂತಹ ಕಮೀಷನ್ ವ್ಯವಹಾರವನ್ನು ಪ್ರೋತ್ಸಾಹಿಸುವುದಿಲ್ಲ ಎಂದು ಆವರು ಹೇಳಿದ್ದಾರೆ.
ಈ ಘಟನೆ ನಂತರ ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ಈ ಬಾರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವಕಾಶ ಕಲ್ಪಿಸಿಲ್ಲ ಎಂದು ದೂರಲಾಗಿದೆ.
ಈ ವಿಚಾರ ಬಹಿರಂಗವಾಗುತ್ತಿದ್ದರೆ ತಾರಾನಾಥ್ ಅವರ ಮನೆಗೆ ದೌಡಾಯಿಸಿದ ದಸರಾ ಸಾಂಸ್ಕ್ರತಿಕ ಸಮಿತಿ ವಿಶೇಷಾಧಿಕಾರಿ ಆಗಿರುವ ಜಿಪಂ ಸಿಇಓ ಕೆ.ಎಂ.ಗಾಯಿತ್ರಿ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಉಪ ನಿರ್ದೇಶಕ ಸುದರ್ಶನ ಅವರು, ತಾರಾನಾಥ್ ಸಂಭಾಷಣೆ ನಡೆಸಿದರು. ನಂತರ ಅಧಿಕಾರಿಗಳು ಯಾರು ನನ್ನ ಬಳಿ ಕಮೀಷನ್ ಕೇಳಿಲ್ಲ ಎಂದು ಸ್ವತಃ ಹೇಳಿದ್ದಾರೆ ಎಂದು ಪ್ರತಿಕ್ರಿಯಿಸಿದರು.
ಈ ಅಧಿಕಾರಿಗಳು ತಾರಾನಾಥ್ ಅವರಾಡಿದ ಮಾತುಗಳನ್ನು ರೆಕಾರ್ಡ್ ಮಾಡಿದ್ದನ್ನು ಮುಖ್ಯಮಂತ್ರಿಗಳ ಕಚೇರಿಯಿಂದ ಮತ್ತು ವಾರ್ತಾ ಇಲಾಖೆಯಿಂದ ಬಿಡುಗಡೆ ಮಾಡಿ, ಯಾರು ಕಮೀಷನ್ ಕೇಳಿಲ್ಲ ಎಂದು ಹೇಳಿದ್ದಾರೆ, ಈ ಬಗ್ಗೆ ಬಂದಿರುವ ಸುದ್ದಿ ಸುಳ್ಳು ಎಂದು ಸಮಜಾಯಿಷಿ ನೀಡಲಾಯಿತು.
ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪನವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿ ತನಿಖೆ ನಡೆಸಲಾಗುವುದು, ಕಲಾವಿದರಿಂದ ಹಣ ಕೇಳುವುದನ್ನು ಸಹಿಸಲಾಗುವುದಿಲ್ಲ ಎಂದು ಹೇಳಿಕೆ ನೀಡಿದರು. ಹೀಗೆ ಏಕ ಆರೋಪಕ್ಕೆ ನಾನಾ ಬಗೆಯಲ್ಲಿ ಸಮರ್ಥನೆ ನೀಡಲಾಯಿತು.
ವಾಸ್ತವವಾಗಿ ನಡೆದಿದ್ದು ಏನು ?
ರಾಜೀವ್ ತಾರಾನಾಥ್ ಅವರ ಅತ್ಯಾಪ್ತ ವಲಯದ ಪ್ರಕಾರ, ಈಗ ಮೈಸೂರಿನ ಸರಸ್ವತಿಪುರಂನಿಂದ ಕುವೆಂಪುನಗರ ಮನೆಯಲ್ಲಿಈಗ ತಾರಾನಾಥ್ ವಾಸವಾಗಿದ್ದಾರೆ. ಈ ಮನೆಗೆ 3 ದಿನಗಳ ಹಿಂದೆ ಹೋಗಿದ್ದ ಅಧಿಕಾರಿಗಳು, ಅ.20 ನಿಮಗೆ ಕಾರ್ಯಕ್ರಮ ನೀಡಲಾಗುವುದು. 8 ಲಕ್ಷ ರು. ಕೊಡಿಸ್ತೀವಿ. ಅದರಲ್ಲಿ 3 ಲಕ್ಷ ನಮಗೆ ಕೊಡಿ ಎಂದು ಕೇಳಿದ್ದಾರೆ. ಇದಕ್ಕೊಪ್ಪದ ತಾರಾನಾಥ್ ಅವರು ಕೆಂಡಮಂಡಲವಾಗಿ ಕಳುಹಿಸಿದ್ದಾರೆ. ಈ ವೇಳೆ ಅವರು ಯಾರೆಂದು ತಿಳಿದುಕೊಂಡಿಲ್ಲ.
ಕಮೀಷನ್ ಆರೋಪ ಬಂದ ಹಿನ್ನೆಲೆಯಲ್ಲಿ ಜಿಪಂ ಸಿಇಓ ಕೆ.ಎಂ. ಗಾಯಿತ್ರಿ, ಕನ್ನಡ, ಸಂಸ್ಕ್ರತಿ ಇಲಾಖೆ ಅಧಿಕಾರಿ ಸುದರ್ಶನ್ ಅವರು, ತಾರಾನಾಥ್ ಅವರಿಗೆ ಈ ಪ್ರಶ್ನೆಗಳನ್ನು ಕೇಳಿದ್ದಾರೆ. ಸಾರ್, ನಿಮ್ಮ ಬಳಿಗೆ ಸಾಂಸ್ಕೃತಿಕ ಸಮಿತಿಯವರು ಅಥವಾ ಅಧಿಕಾರಿ ಯಾರಾದರೂ ಬಂದಿದ್ದರಾ? ಎಂದಷ್ಟೇ ಕೇಳಿದ್ದಾರೆ. ಇದಕ್ಕೆ ತಾರಾನಾಥ್ ಇಲ್ಲ ಎಂದು ಹೇಳಿದ್ದಾರೆ. ಕಮಿಷನ್ ಕೇಳಿದರಾ ಎಂಬಿತ್ಯಾದಿ ವಿವರಣೆಗಳನ್ನು ಅವರಿಂದ ಕೇಳಿಲ್ಲ.
ಗಂಭೀರವಾಗಿ ನೋಡಬೇಕು
ಭ್ರಷ್ಟಾಚಾರ ಎಂಬುದು ರಾಜಕೀಯ, ಆಡಳಿತ ಕ್ಷೇತ್ರಕ್ಕೆ ಮಾತ್ರ ಸಿಮೀತವಾಗಿಲ್ಲ. ಎಲ್ಲಾ ಕಡೆ ರುದ್ರ ನರ್ತನ ಮಾಡುತ್ತಿದೆ. ಈಗ ಭ್ರಷ್ಷ ಮುಕ್ತ ಸಮಾಜವನ್ನು ಕಟ್ಟಲು ಎಲ್ಲರೂ ಕೈಜೋಡಿಸಬೇಕಿದೆ. ಇಂತಹ ಮಹಾನ್ ಸಂಗೀತಗಾರರ ಬಳಿ ಕಮಿಷನ್ ಕೇಳಿದರು ಎಂಬ ಆರೋಪವನ್ನು ಗಂಬೀರವಾಗಿ ನೋಡಬೇಕಿದೆ.
-ಜಿ.ಪಿ. ಬಸವರಾಜು, ಹಿರಿಯ ಪತ್ರಕರ್ತರು, ಸಾಹಿತಿಗಳು.
ಕ್ರಮ ಜರುಗಿಸಬೇಕು
ಸಂಗೀತ ದಿಗ್ಗಜ ಹಾಗೂ ಮಾಂತ್ರಿಕನ ಬಳಿ ಕಮಿಷನ್ ಕೇಳಿರುವುದು ಬೇಸರದ ಸಂಗತಿ. ಇದಕ್ಕೆ ಸಂಬಂಧಿಸಿದವರ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಎಚ್.ಸಿ. ಮಹದೇವಪ್ಪ ಅವರುಕ್ರಮ ಜರುಗಿಸಬೇಕು.
-ಸುಗುಣ, ರಂಗ ಕಲಾವಿದರು, ನಿರಂತರ ಕಲಾ ಸಂಸ್ಥೆ.