ಸುದ್ದಿಮೂಲ ವಾರ್ತೆ
ರಾಮನಗರ, ಜೂ 28 : ಕೆ.ಎಸ್.ಆರ್.ಟಿ.ಸಿ ಎಲೆಕ್ಟ್ರಿಕ್ ಬಸ್ ಮತ್ತು ಟ್ರಕ್ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಬಸ್ ನಿರ್ವಾಹಕ ಸಾವನ್ನಪ್ಪಿದ್ದು, 25 ಮಂದಿ ಗಾಯಗೊಂಡಿರುವ ಘಟನೆ ಇಲ್ಲಿಗೆ ಸಮೀಪದ ಜಯಪುರ ಬಳಿಯ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಬಸ್ ನಿರ್ವಾಹಕ ಜಿ.ರಮೇಶ್ (48) ಮೃತರು. ಪ್ರಯಾಣಿಕರ ಪೈಕಿ 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸು ಮುಂದೆ ಸಾಗುತ್ತಿದ್ದ ಪ್ಲೈವುಡ್ ಶೀಟ್ ತುಂಬಿದ್ದ ವಾಹನವನ್ನು ಹಿಂದಿಕ್ಕುವ ಭರದಲ್ಲಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಮುಂದಿದ್ದ ವಾಹನ ಹೆದ್ದಾರಿಯಲ್ಲಿಯೇ ಉರುಳಿದ್ದರಿಂದ ಅದರಲ್ಲಿದ್ದ ಪ್ಲೈವುಡ್ ಶೀಟ್ಗಳು ಬಸ್ ಮುಂಭಾಗಕ್ಕೆ ನುಗ್ಗಿ, ಬಸ್ನ ಸ್ಟೀರಿಂಗ್ ಲಾಕ್ ಆಗಿದೆ. ಹೀಗಾಗಿ ಚಾಲಕನ ನಿಯಂತ್ರಣ ತಪ್ಪಿ ಬಸ್ಸು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸರ್ವಿಸ್ ರಸ್ತೆಯನ್ನು ದಾಟಿ ರಸ್ತೆ ಪಕ್ಕದ ಜಮೀನಿಗೆ ನುಗ್ಗಿದೆ ಎಂದು ತಿಳಿದುಬಂದಿದೆ.
ಗಾಯಗೊಂಡಿರುವ ಪ್ರಯಾಣಿಕರನ್ನು ರಾಮನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.