ಸುದ್ದಿಮೂಲ ವಾರ್ತೆ
ದೇವನಹಳ್ಳಿ,ನ.27: ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಭಾಷೆಯ ರಾಯಭಾರಿಯಾಗಿ ನೆಲದ ಸದ್ವಿಚಾರಗಳನ್ನು ಕಾಪಾಡುವ ಸೈನಿಕನಂತೆ ಯುವಕರು ಕೆಲಸ ಮಾಡಬೇಕಿದೆ. ನೆಲದ ಭಾಷೆಗೆ ಗೌರವ ನೀಡಿದರೇ ಎಲ್ಲರಿಗೂ ಗೌರವ ನೀಡಿದಂತೆ’ ಎಂದು ಜಾಲಿಗೆ ಪಂಚಾಯಿತಿಯ ಸದಸ್ಯ ಬೆಟ್ಟಹಳ್ಳಿ ಮಹೇಶ ಕುಮಾರ್ ತಿಳಿಸಿದರು.
ತಾಲ್ಲೂಕಿನ ಕುಂದಾಣ ಹೋಬಳಿಯ ಬೆಟ್ಟೇನಹಳ್ಳಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಕರ್ನಾಟಕ ಸಂಭ್ರಮ-50′ ಕಾರ್ಯಕ್ರಮದಲ್ಲಿ ಮಹೇಶ್ವರಮ್ಮ ದೇವಿ ವೃತ್ತದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದರು.
ಓದುವಂತೆ ಮಾತನಾಡುವ, ಮಾತನಾಡುವಂತೆ ಬರೆಯುವ ಹಾಗೂ ನುಡಿದಂತೆ ನಡೆಯುವ ಜನರು ಕನ್ನಡಿಗರು. ಶಿವನ ಡಮರುಗದ ನಾದದಿಂದ ಕನ್ನಡ ಭಾಷೆ ಉಗಮಗೊಂಡಿದ್ದು, ಇದೊಂದು ದೇವಭಾಷೆಯಾಗಿದೆ. ಕರುನಾಡಿನಲ್ಲಿ ಜನ್ಮಿಸಿದ ಭಗವಾನ್ ನುಮಂತನಂತೆ ಕನ್ನಡ ಭಾಷೆಯೂ ಚಿರಂಜೀವಿಯಾಗಿದ್ದು, ಕನ್ನಡಿಗರ ಆಸ್ಮಿತೆಯ ಪ್ರತೀಕವಾಗಿದೆ’ ಎಂದು ತಿಳಿಸಿದರು.
ವಿಶ್ವ ಲಿಪಿಗಳ ರಾಣಿ ಎಂದೇ ಕನ್ನಡವನ್ನು ಗುರುತ್ತಿರುತ್ತಾರೆ. ಪ್ರಪಂಚದಲ್ಲಿ ಅತ್ಯಂತ ವೈಜ್ಞಾನಿಕ ಭಾಷೆ ಕನ್ನಡ, ಶ್ರೀಮಂತ ಇತಿಹಾಸ ಹೊಂದಿರು ಕನ್ನಡ ನುಡಿಯ ವೈಭವ ಸ್ಮರಿಸುತ್ತಾ, ನಾಡಿನ ಏಕೀಕರಣಕ್ಕೆ ಶ್ರಮಿಸಿದ ಮಹಾನೀಯರನ್ನು ಸ್ಮರಿಸುತ್ತಾ ಭುವನೇಶ್ವರಿಯ ಸೇವೆಗೆ ಯುವ ಪಡೆ ಸಜ್ಜಾಗಬೇಕು’ ಎಂದು ಕರೆ ನೀಡಿದರು.
ಜಾಲಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಎಸ್.ಎಂ.ಆನಂದ್ ಕುಮಾರ್ ಮಾತನಾಡಿ, ‘ಅನ್ಯ ಭಾಷಿಕರು ಮಾತನಾಡುವಾಗ ನಮ್ಮ ಭಾಷೆಯಲ್ಲಿ ಉತ್ತರಿಸುವ ಮನೋಭಾವ ಹೊಂದಬೇಕು. ಭಾಷಾಭಿಮಾನವನ್ನು ನಿಜ ಜೀವನದಲ್ಲಿ ಪ್ರದರ್ಶಿಸುವ ಅಗತ್ಯತೆ ಇದೆ. ನಾಡಿನ ಸಾಹಿತ್ಯ, ಕಲೆ, ಸಂಸ್ಕೃತಿಯ ಕುರಿತು ವೈವಿಧ್ಯಮಯವಾದ ಸಮಾರಂಭಗಳು ವರ್ಷದ ಎಲ್ಲ ತಿಂಗಳ ಆಯೋಜಿಸಬೇಕು’ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಗ್ರಾಮದ ಮುಖಂಡರಾದ ಮುನೇಗೌಡ, ದೊಡ್ಡಕೆಂಪಣ್ಣ, ಹಿರಿಯರಾದ ಸೀನಪ್ಪ, ಡೇರಿ ಅಧ್ಯಕ್ಷ ಜಯಣ್ಣ, ಬೆಟ್ಟೇನಹಳ್ಳಿ ಹನುಮಸೇನೆಯ ಯುಕವರು, ಕೂರ್ಲಪ್ಪ, ಚಿಕ್ಕ ಮುನಿಯಪ್ಪ, ಕೇಶವ್ , ಮಾಸ್ಟರ್ ರಾಮಾಂಜಿನಪ್ಪ , ಪ್ರಸನ್ನ ಚಾರ್, ಮಹೇಶ್, ಮೋಹನ್, ಮುನಿಯಪ್ಪ ಇದ್ದರು.