ಸುದ್ದಿಮೂಲವಾರ್ತೆ
ಮಾನ್ವಿ ಏ.10 : ರಾಜ್ಯದಲ್ಲಿ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬಂದರೆ ಭೃಷ್ಟಾಚಾರ ರಹಿತ ಆಡಳಿತ ನೀಡುವುದಾಗಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿರೆಡ್ಡಿ ಹೇಳಿದರು.
ಸೋಮವಾರ ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ನಡೆದ ಪಕ್ಷದ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡುತ್ತಿದ್ದರು.
ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ದೆಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ಮಾಡಿದಂತೆ ಜನಪ್ರಿಯ ಕೆಲಸಗಳನ್ನು ಮಾಡಲಾಗುವುದು. ನಮ್ಮ ಆಡಳಿತಾವಧಿಯಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯದೇ ಇದ್ದಲ್ಲಿ ಜನರು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಬಹುದಾಗಿದೆ.
ಎಎಪಿ ಸರಕಾರ ಎಂದಿಗೂ ಯಾವುದನ್ನು ಉಚಿತವಾಗಿ ನೀಡುವುದಿಲ್ಲ. ಜನರು ಕಟ್ಟಿದ ತೆರಿಗೆ ಹಣವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ ಜನರಿಗೆ ವಿವಿಧ ಸೌಲಭ್ಯ ಒದಗಿಸಲಾಗುವುದು. ಶಾಸಕರಾಗುವುದು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುವುದಕ್ಕಲ್ಲ. ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ತಿಳಿದುಕೊಂಡು ಅವುಗಳನ್ನು ನಿವಾರಿಸುವುದಕ್ಕಾಗಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು, ಉಚಿತವಾಗಿ ವಿದ್ಯುತ್ ನೀಡುವ ಜನಪರ ಯೋಜನೆ ತರುವುದಾಗಿ ಹೇಳಿದರು.
ಮಾನ್ವಿ ಕ್ಷೇತ್ರದ ಎಎಪಿ ಅಭ್ಯರ್ಥಿ ರಾಜಾ ಶ್ಯಾಮ್ ಸುಂದರ ನಾಯಕ ವಕೀಲ ಮಾತನಾಡಿ ಪ್ರಸಕ್ತ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ನನಗೆ ಒಂದು ಬಾರಿ ಅವಕಾಶ ನೀಡಿದರೆ ತಾಲೂಕಿನ ಕೊನೆ ಭಾಗದ ಎಡದಂಡೆಯ ನಾಲೆಯ ರೈತರ ನೀರಾವರಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ, ಭೃಷ್ಟಾಚಾರ ರಹಿತ ಉತ್ತಮ ಆಡಳಿತವನ್ನು ನೀಡಲಾಗುವುದು. ಜನಸಂಖ್ಯೆಗೆ ಅನುಗುಣವಾಗಿ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ವೇದಿಕೆಯ ಮೇಲೆ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ರುದ್ರಯ್ಯ ಹಿರೇಮಠ, ವಿಜಯಶರ್ಮ, ರಾಯಚೂರು ನಗರ ಕ್ಷೇತ್ರದ ಅಭ್ಯರ್ಥಿ ಡಿ.ವಿರೇಶ, ಸಿಂಧನೂರು ಕ್ಷೇತ್ರದ ಅಭ್ಯರ್ಥಿ ಸಂಗ್ರಾಮ ಕಿಲ್ಲಾದ್, ಜಿಲ್ಲಾ ಸಂಚಾಲಕ ಬಸವರಾಜ ಗುತ್ತೆದಾರ, ತಾಲೂಕಾಧ್ಯಕ್ಷ ಶರಣೇಗೌಡ ಕೆಳಗೇರಿ, ನಗರ ಘಟಕದ ಅಧ್ಯಕ್ಷ ಯೂಸೂಫ್ ಖುರೇಶಿ, ಸಜ್ಜಾದ್ ಮತವಾಲೆ, ಮುಖಂಡರಾದ ನಾಗರಾಜ, ಸೈಯದ್ ತಾಹೇರ್ ಹುಸೇನಿ ಮತವಾಲೆ, ಎಂ.ಡಿ.ಮಕ್ಬೂಲ್ ಪಾಷಾ, ವೆಂಕಟೇಶ ನಾಯಕ, ಬಸವರಾಜ, ದೇವರಾಜ ನಾಯಕ, ಬಸವರಾಜ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬಹಿರಂಗ ಸಭೆಯ ಮುಂಚೆ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಬಸವವೃತ್ತದ ಮಾರ್ಗವಾಗಿ ಟಿಎಪಿಸಿಎಂಎಸ್ ಆವರಣದ ವರೆಗೆ ಪಾದಯಾತ್ರೆ ಮೂಲಕ ಅಭ್ಯರ್ಥಿ ಪರವಾಗಿ ನೂರಾರು ಕಾರ್ಯಕರ್ತರಿಂದ ಪ್ರಚಾರ ನಡೆಸಲಾಯಿತು.