ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 20: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿದ್ದರಾಮಯ್ಯ ಅವರು ಮೊದಲ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು. ಸಂಜೆ ವೇಳೆಗೆ ಐದು ಸರ್ಕಾರಿ ಆದೇಶಗಳನ್ನು ಆಯಾ ಇಲಾಖೆಯಿಂದ ಹೊರಡಿಸಲಾಗಿದೆ.
ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಕುಟುಂಬದ ಸದಸ್ಯನಿಗೆ 10 ಕೆ.ಜಿ. ಅಕ್ಕಿ ವಿತರಿಸುವಂತಹ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿ ಆಹಾರ ನಾಗರಿಕ ಸರಬರಾಜು ಇಲಾಖೆ ಆದೇಶ ಹೊರಿಡಿಸಿದೆ.
ಮನೆಒಡತಿಗೆ ಮಾಸಿಕ 2000 ರೂ. ನೀಡುವ ಗೃಹಲಕ್ಷ್ಮೀ ಯೋಜನೆ ಜಾರಿ ಮಾಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆದೇಶ ಪ್ರಕಟಿಸಿದೆ.
ಪದವೀಧರರಿಗೆ 3 ಸಾವಿರ ರೂ. ಮತ್ತು ಡಿಪ್ಲೊಮಾ ಪದವೀಧರರಿಗೆ ಮಾಸಿಕ 1500 ರೂ. ನೀಡುವ ಯುವ ನಿಧಿ ಯೋಜನೆಯನ್ನು ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲ ಯೋಜನೆಯಿಂದ ಹೊರಡಿಸಲಾಗಿದೆ.
ರಾಜ್ಯದ ಮಹಿಳೆಯರಿಗೆ ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣ ಮಾಡುವ ‘ಶಕ್ತಿ’ ಯೋಜನೆ ಅನುಷ್ಠಾನಗೊಳಿಸಲು ಸಂಪುಟದಲ್ಲಿ ತೆಗೆದುಕೊಂಡ ನಿರ್ಣಯದಂತೆ ರಾಜ್ಯದ ಕೆಎಸ್ಆರ್ಟಿಸಿ, ಬಿಎಂಟಿಸಿ ಸಹಿತ ಎಲ್ಲಾ ನಿಗಮಗಳ ಸಾರಿಗೆ ಸಂಸ್ಥೆ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಆದೇಶ ನೀಡಲಾಗಿದೆ.