ಸುದ್ದಿಮೂಲ ವಾರ್ತೆ
ಹೊಸಕೋಟೆ.ನ.01. ಕರ್ನಾಟಕ ಪದದ ಮೂಲ ಸಂಸ್ಕೃತ, ಸಂಸ್ಕೃತದ ಕನ್ನಡ ಎಂಬ ಪದದಿಂದ ಕರ್ನಾಟಕ ಹುಟ್ಟಿದೆ. ಎಂದು ನಂದಗುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುನಿವೆಂಕಟಮ್ಮ ಬಚ್ಚಪ್ಪ ಹೇಳಿದರು.
ಅವರು ಹೊಸಕೋಟೆ ತಾಲೂಕು ನಂದಗುಡಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಕನ್ನಡಿಗರ ನಾಡು ಕನ್ನಾಡು, ಕನ್ನಡ ನಾಡು ಎಂಬುದು ಇದರ ಅರ್ಥ.ಆದರೆ ಕರ್ನಾಟಕ ಎಂಬ ಪದದ ಹುಟ್ಟು ಅಥವಾ ಅರ್ಥದ ಬಗ್ಗೆ ಇನ್ನೂ ಹಲವು ಅಭಿಪ್ರಾಯಗಳೂ ಇದೆ. ಕರು+ ನಾಡು= ಕರುನಾಡು ಎಂಬ ಪದವು ಕರ್ನಾಟಕವಾಯಿತು ಎನ್ನಲಾಗುತ್ತದೆ.
ಕರು ಎಂದರೆ ಕಪ್ಪು, ಇದರರ್ಥ ಕಪ್ಪು ಮಣ್ಣಿನ ನಾಡು ಎಂದೂ ಸಹ ಹೇಳಲಾಗುತ್ತದೆ. ಹಳೆಯ ಗ್ರಂಥಗಳು ಇದನ್ನು ಕರ್ನಾಟ ಎಂಬ ಪದದಿಂದ ಪಡೆಯಲಾಗಿದೆ ಎಂದು ಸೂಚಿಸುತ್ತವೆ, ಕೆಲವು ಮೂಲಗಳು ಕರ್ನಾಟಕವನ್ನು ಎತ್ತರದ ಭೂಮಿಗೆ ಅನುವಾದಿಸುತ್ತದೆ.
ನಮ್ಮ ಕರ್ನಾಟಕವನ್ನು ಕನ್ನಡ ನಾಡು, ಕರುನಾಡು, ಶ್ರಿಗಂಧದ ನಾಡು ಎಂದೂ ಕರೆಯಲಾಗುತ್ತದೆ. ನಮ್ಮ ನಾಡ ದೇವಿ ಭುವನೇಶ್ವರಿ. ಕುವೆಂಪು ರಚನೆಯ ‘ಜಯ ಭಾರತ ಜನನೀಯ ತನುಜಾತೆ. ಜಯಹೇ ಕರ್ನಾಟಕ ಮಾತೆ’ ಗೀತೆಯು ನಮ್ಮ ನಾಡಗೀತೆಯಾಗಿದೆ.
ನಮ್ಮ ರಾಜ್ಯದ ಬಾವುಟ ಹಳದಿ ಮತ್ತು ಕೆಂಪು ಬಣ್ಣದಿಂದ ಕೂಡಿದೆ. ಕನ್ನಡ ಹೋರಾಟಗಾರ ಎಂ ರಾಮಮೂರ್ತಿ ಅವರು ಹಳದಿ ಹಾಗೂ ಕೆಂಪು ಬಣ್ಣದಿಂದ ಕೂಡಿದ ಬಾವುಟವನ್ನು ಸಿದ್ದಪಡಿದ್ದರು. ಹಳದಿ ಬಣ್ಣವು ಶಾಂತಿ ಮತ್ತು ಸೌಹಾರ್ದತೆ ಸೂಚಿಸುತ್ತದೆ.
ಕೆಂಪು ಬಣ್ಣವು ಕ್ರಾಂತಿಯ ಸಂಕೇತವಾಗಿದೆ. ಹಾಗೆಯೇ ಇದು ಕನ್ನಡಾಂಬೆ ಭುವನೇಶ್ವರಿಯ ಅರಿಶಿನ-ಕುಂಕುಮದ ಸಂಕೇತವೂ ಆಗಿದೆ. ಇತ್ತೀಚಿನ ವರ್ಷಗಳಲ್ಲಿ ಕನ್ನಡದ ಸ್ಥಿತಿಗತಿ ಬದಲಾಗಿದೆ. ಕನ್ನಡದ ಮೇಲೆ ಇತರೆ ಭಾಷಿಕರ ದಬ್ಬಾಳಿಕೆ ಹೆಚ್ಚಾಗಿದೆ. ಕನ್ನಡಿಗರಿಗೆ ಉದ್ಯೋಗ ದೊರಕುವುದು ಕಷ್ಟವಾಗಿದೆ.
ಇಂತಹ ಸಮಯದಲ್ಲಿ ಕನ್ನಡದ ಅಸ್ಮಿತೆಗಾಗಿ ಎಲ್ಲರೂ ಹೋರಾಡಬೇಕಾಗಿದೆ. ಕೇವಲ ಈ ದಿನ ಮಾತ್ರ ಕನ್ನಡ ರಾಜ್ಯೋತ್ಸವ ಆಚರಿಸಿದರೆ ಕನ್ನಡ ಉಳಿಸಿದಂತೆ ಆಗುವುದಿಲ್ಲ. ಕನ್ನಡ ನಮ್ಮ ಉಸಿರಾಗಿರಬೇಕು. ಎಂತಹ ಸಂದರ್ಭದಲ್ಲೂ ಕನ್ನಡ ಬಿಟ್ಟುಕೊಡಬಾರದು. ಬೇರೆ ಭಾಷೆಗಳನ್ನು ಕಲಿಯುವುದು ಖಂಡಿತ ತಪ್ಪಲ್ಲ.
ಆದರೆ ಬೇರೆ ಭಾಷೆ ಕಲಿತು ಕನ್ನಡ ಮರೆಯುವುದು ತಪ್ಪು. ಈ ಸುಂದರ ಸಂಭ್ರಮದ ದಿನದಂದು ನಾವೆಲ್ಲರೂ ನಮ್ಮ ನೆಲ, ಜಲ, ಭಾಷೆ ಉಳಿವಿಗಾಗಿ ಪಣ ತೊಡಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೇ ಮಾಜರ್ ಉನ್ನಿಸ ಪಾಷಾ ಖಾನ್ ಸದಸ್ಯರುಗಳಾದ ಜಯರಾಮಪ್ಪ ಗಾಯತ್ರಿ ನಾಗೇಶ್ ಸುಮಾ ಗೋಪಾಲ್ ಮುನಿರತ್ನಮ್ಮ ಶಿವಕುಮಾರ್ ಪಂಚಾಯಿತಿ ಕಾರ್ಯದರ್ಶಿ ವೆಂಕಟೇಶ್ ಲೆಕ್ಕಾಧಿಕಾರಿ ಸಂಪತ್ ಕುಮಾರ್ ಕರ ವಸೂಲಿಗಾರರಾದ ಮನೋಜ್ ಕುಮಾರ್ ನಯನ ಭವ್ಯ ಪಂಚಾಯಿತಿ ಸಿಬ್ಬಂದಿಗಳಾದ ವೆಂಕಟೇಶ್ ರಾಜೇಶ್ ಸುಬ್ಬಣ್ಣ ಜಯಪ್ರಕಾಶ್ ನಂದಗುಡಿ ಸಮಾಜ ಸೇವಕರಾದ ಚಿಕ್ಕರಾಮಯ್ಯ ಇನ್ನೂ ಅನೇಕರು ಭಾಗವಹಿಸಿದ್ದರು.