ಸುದ್ದಿಮೂಲ ವಾರ್ತೆ
ನೆಲಮಂಗಲ,ನ.28: ರೈತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತ ನಿರ್ಲಕ್ಷ ತೋರುತ್ತಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿದರು.
ನಗರದ ಪ್ರವಾಸಿ ಮಂದಿರ ದಿಂದ ಪ್ರತಿಭಟನಾ ಮೆರವಣಿಗೆ ಹೊರಟ ರೈತರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ತಡೆದು. ತಾಲೂಕು ಕಚೇರಿಗೆ ಬೀಗ ಹಾಕಿದರು. ತಾಲೂಕು ಕಚೇರಿ ಮುಂದೆ ಕುಳಿತು ಪ್ರತಿಭಟನಾಕಾರರು ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ನೆಲಮಂಗಲ ತಾಲೂಕಿನಲ್ಲಿ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ರೈತರನ್ನು ಒಕ್ಕಲಿಬ್ಬಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಲು ಹೊರಟಿದೆ. ರೈತರನ್ನು ವಂಚಿಸುವ ದಲ್ಲಾಳಿಗಳು ಮತ್ತು ಭೂ ಮಾಫಿಯಾದವರೊಂದಿಗೆ ಶಾಮೀಲಾಗಿ ರೈತರ ದಾಖಲೆಗಳನ್ನು ಸರಿಪಡಿಸುವ ಬದಲಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಹಸೀಲ್ದಾರ್ ವಿರುದ್ಧ ಆಕ್ರೋಶ
ರೈತರ ಪ್ರತಿಭಟನೆ ಇರುವುದು ಗೊತ್ತಿದ್ದರೂ ರೈತರ ಹೋರಾಟದ ದಿಕ್ಕು ತಪ್ಪಿಸುವ ಸಲುವಾಗಿ ಕೆಲವು ರೈತ ಸಂಘಟನೆಯರೊಂದಿಗೆ ತರಾತುರಿಯಲ್ಲಿ ಸಭೆ ನಡೆಸುತ್ತಿರುವುದನ್ನು ಕಂಡ ರೈತರು ತಹಸಿಲ್ದಾರ್ ಅರುಂಧತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಸ್ಥಳಕ್ಕೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಎಂ. ಶ್ರೀನಿವಾಸ್ ಜಿಲ್ಲಾಧಿಕಾರಿಯೊಂದಿಗೆ ನಾನು ಈಗಾಗಲೇ ಮಾತನಾಡಿದ್ದೇನೆ. ಡಿ.4ರಂದು ಜಿಲ್ಲಾಧಿಕಾರಿಗಳು ನೆಲಮಂಗಲದಲ್ಲಿ ರೈತರ ಸಭೆಯನ್ನು ನಡೆಸಿ ಸಮಸ್ಯೆಗಳನ್ನು ಪರಿಹರಿಸುವರು ಎಂದು ಭರವಸೆ ನೀಡಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ರೈತರು ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ರಾಜೇಶ್. ಪ್ರಧಾನ ಕಾರ್ಯದರ್ಶಿ ಗುರುಮೂರ್ತಿ, ರವೀಂದ್ರ, ಕೇಶವ್, ಜಗದೀಶ್, ದೇವರಾಜ್, ಸೋಮಶೇಖರ್ ಹಾಗೂ ರೈತರು ಭಾಗವಹಿಸಿದ್ದರು.