ಹೊಸಕೋಟೆ, ಜು 12 : ಪ್ರಯಾಣಿಕರ ರಕ್ಷಣೆಗಾಗಿ ದೂರದಿಂದ ಬಂದವರ ವಿಶ್ರಾಂತಿಗೆಂದು ನಿರ್ಮಿಸಿದ ಬಸ್ ತಂಗುದಾಣ ಅವೈಜ್ಞಾನಿಕವಾಗಿ ಜನರಿಗೆ ಅನುಕೂಲವಾಗದೆ, ನಿರ್ವಹಣೆ ಕೊರತೆಯಿಂದ ಗಿಡ-ಗಂಟೆಗಳು ಬೆಳೆದು ನಿಂತು ಶಿಥಿಲವಾಗಿ ಬೀಳುವ ಹಂತಕ್ಕೆ ತಲುಪಿದ್ದರೂ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.
ಹೊಸಕೋಟೆ ತಾಲೂಕಿನ ಮುಗಬಾಳ ಗ್ರಾಪಂ ವ್ಯಾಪ್ತಿಗೆ ಬರುವ ಹಲಸಹಳ್ಳಿ ಗೇಟ್ನಲ್ಲಿ ರಾಷ್ಟ್ರೀಯ ಹೆದಾರಿ 75 ರಲ್ಲಿ ಲ್ಯಾನ್ನೋ ಕಂಪನಿಯವರ ನಿರ್ಲಕ್ಷ್ಯದಿಂದ ಸುಮಾರು 10 ವರ್ಷಗಳ ಹಿಂದೆ ನಿರ್ಮಿಸಲಾದ ಬಸ್ ತಂಗುದಾಣ ಕಟ್ಟಡವು ಸುಣ್ಣ ಬಣ್ಣವೆಲ್ಲ ಮಾಸಿ ಹೋಗಿ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಗಿಡ-ಗಂಟೆಗಳು ಬೆಳೆದು ಪೊದೆಯಂತಾಗಿ ಪ್ರಯಾಣಿಕರ ಅನುಕೂಲಕ್ಕೆ ಬಾರದಂತಾಗಿದೆ.
ಕುಡುಕರ ಅಡ್ಡೆ : ತಂಗುದಾಣದ ಮುಂದೆ ರಾಜಕಾಲುವೆ ಹಾದು ಹೋಗಿದ್ದು, ತಂಗುದಾಣಕ್ಕೆ ಹೋಗಲು ಹರಸಾಹಸ ಪಡಬೇಕು. ಈ ಕಾರಣದಿಂದ ಬೆಳಗ್ಗೆ ಮತ್ತು ರಾತ್ರಿ ಸಮಯದಲ್ಲಿ ಕುಡುಕರು ಇದನ್ನೇ ಅಡ್ಡೆಯನ್ನಾಗಿ ಮಾಡಿಕೊಂಡಿದ್ದಾರೆ. ಜನತೆಗೆ ಅನೈತಿಕ ಚಟುವಟಿಕೆ ತಾಣವಾಗಿಯು ಪರಿವರ್ತನೆಯಾಗಿದೆ.
ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯ : ಬಸ್ ತಂಗುದಾಣ ನಿರ್ವಹಣೆಯಿಲ್ಲದೆ ಜನರ ಉಪಯೋಗಕ್ಕೆ ಬಾರದಂತಾಗಿದ್ದರೂ ಸಹ ಸ್ಥಳೀಯ ಗ್ರಾಪಂನ ಅಧ್ಯಕ್ಷರು, ಸದಸ್ಯರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ನೀಡದೆ ನಿರ್ಲಕ್ಷ್ಯಧೋರಣೆ ತಾಳಿದ್ದಾರೆ. ದಿನ ಕಳೆಯುತ್ತಿದ್ದಂತೆ , ಮಳೆ, ಗಾಳಿ, ಬಿಸಿಲಿಗೆ ಸಿಲುಕಿ ಪಾಳು ಬಿದ್ದು ಶಿಥಿಲಾವಸ್ಥೆ ಹಂತಕ್ಕೆ ತಲುಪಿದೆ . ಕ್ಷೇತ್ರದ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಶಿಥಿಲವಾಗಿರುವ ತಂಗುದಾಣವನ್ನು ಕೆಡವಿ, ನೂತನವಾಗಿ ಸೂಕ್ತ ಜಾಗದಲ್ಲಿ ಬಸ್ ತಂಗುದಾಣ ನಿರ್ಮಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಹಲಸಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ
ಹಲಸಹಳ್ಳಿ ಗೇಟ್ ಬಳಿ ಬಸ್ ತಂಗುದಾಣ ಹಲವು ವರ್ಷವಾ ಗಿದ್ದು, ಸೂಕ್ತ ಜಾಗದಲ್ಲಿ ನಿರ್ಮಿಸದೆ ಜನರ ಬಳಕೆಗೆ ಬಾರದಂತಾಗಿ ಗಿಡಗಳು ಬೆಳೆದು ಪೊದೆಯಂತಾಗಿ ಅನೈತಿಕ ಚಟುವಟಿಕೆಯ ತಾಣವಾಗಿದೆ. ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಬಸ್ ತಂಗುದಾಣ ನಿರ್ವಹಣೆಗೆ ಮುಂದಾಗಬೇಕು.
ಮಂಜುನಾಥ್ , ಹಲಸಹಳ್ಳಿ
ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಲ್ಯಾನ್ಸ್ ಕಂಪನಿಯವರು ಬಸ್ ತಂಗುದಾಣ ನಿರ್ಮಿಸಿದ್ದು, ಅವರೇ ನಿರ್ವಹಣೆಯ ಹೊಣೆ ಹೊತ್ತಿದ್ದಾರೆ. ಇದರ ದುಸ್ಥಿತಿಯ ಬಗ್ಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದು, ಜರೂರಾಗಿ ಸಂಬಂಧಪಟ್ಟವರಿಗೆ ಪತ್ರ ಬರೆದು ದುರಸ್ತಿಗೆ ಕ್ರಮ ವಹಿಸುವಂತೆ ಮನವಿ ಸಲ್ಲಿಸಲಾಗುವುದು.