ಸುದ್ದಿಮೂಲವಾರ್ತೆ
ಕೊಪ್ಪಳ ಸೆ 13:ಯಾರೇ ಆಗಲಿ ಧರ್ಮಗಳ ವಿಚಾರದಲ್ಲಿ ಯಾರೂ ಸಹ ಮೂಗು ತೂರಿಸಬಾರದು ಎಂದು ಪಂಚಮಸಾಲಿ ಸಮಾಜದ ಕೂಡಲಸಂಗಮ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಜಿ ಹೇಳಿದರು.
ಅವರು ಇಂದು ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಭಾರತ ದೇಶ ಬಹುಮುಖಿ ಸಂಸ್ಕೃತಿಯ ದೇಶವಾಗಿದೆ. ಇಲ್ಲಿ ಸನಾತನ, ಬೌದ್ಧ, ಸಿಖ್ ಸೇರಿದಂತೆ ಹಲವು ಧರ್ಮಗಳಿವೆ. ಎಲ್ಲ ಧರ್ಮಗಳ ಉದ್ದೇಶ ಭಗವಂತನ ಸಾಮಿಪ್ಯಕ್ಕೆ ಹೋಗುವುದಾಗಿದೆ. ಯಾವ ಧರ್ಮವನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ. ಒಂದು ಧರ್ಮವನ್ನು ಹೀಯಾಳಿಸೋದು ಸರಿಯಲ್ಲ ಅದು ತಪ್ಪು. ಎಲ್ಲ ಧರ್ಮಗಳಲ್ಲಿನ ಸೈದ್ಧಾಂದಿಕ ಭಿನ್ನಾಭಿಪ್ರಾಯವಿರುತ್ತದೆ. ಭಿನ್ನಾಭಿಪ್ರಾಯದ ಕಾರಣಕ್ಕೆ ಇಡೀ ಧರ್ಮವನ್ನು ನಾಶ ಮಾಡುತ್ತೇವೆ ಅನ್ನೋದು ತಪ್ಪು. ಯಾವ ಧರ್ಮದ ಬಗ್ಗೆಯೂ ಯಾರೂ ಟೀಕೆ ಮಾಡಬಾರದು. ಎಲ್ಲ ಧರ್ಮದಲ್ಲಿಯೂ ಒಳ್ಳೆಯದಿರುತ್ತದೆ ಎಂದರು.
ಧರ್ಮದ ವಿಚಾರದಲ್ಲಿ ಯಾರೂ ಸಹ ತೇಜೋವಧೆ ಮಾಡಬಾರದು. ಯಾವುದೇ ಧರ್ಮಗಳ ಬಗ್ಗೆ ಯಾರೂ ಸಹ ಮಾತನಾಡಬಾರದು. ಸೈದ್ಧಾಂತಿಕವಾಗಿ ಚರ್ಚೆ ಮಾಡಲಿ. ಆರೋಗ್ಯಪೂರ್ಣವಾಗಿ ಚರ್ಚೆ ಮಾಡಬೇಕು. ಆದರೆ ಧರ್ಮಗಳ ನಾಶ ಮಾಡುವ ಕೆಟ್ಟ ಆಲೋಚನೆ ಮಾಡಬಾರದು ಎಂದು ಹೇಳಿದರು.
ರೈತರ ಆತ್ಮಹತ್ಯೆ ಬಗ್ಗೆ ಸಚಿವ ಶಿವಾನಂದ ಪಾಟೀಲ್ ಹೇಳಿರೋದು ತಪ್ಪು. ಅವರ ಹೇಳಿಕೆಯನ್ನು ವಾಪಾಸ್ ಪಡೆದಿದ್ದು ಮತ್ತೆ ಚರ್ಚೆ ಬೇಡ ನಮ್ಮದು ದೊಡ್ಡ ಸಮಾಜ. ಅದೇ ಸಮಸ್ಯೆಯಾಗಿದೆ. ಮೀಸಲಾತಿ ಇಲ್ಲದೆ ಒಗ್ಗಟ್ಟಾಗಿದ್ದಾರೆ. ಮೀಸಲಾತಿ ನೀಡಿದರೆ ಮತ್ತಷ್ಟು ಒಗ್ಗಟ್ಟಾಗುತ್ತಾರೆ ಎಂದು ಪಟ್ಟಭದ್ರ ಹಿತಾಸಕ್ತಿಗಳು ಏಳಿಗೆಯನ್ನು ಸಹಿಸುತ್ತಿಲ್ಲ ಎಂದು ಹೇಳಿದರು.
ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿಗೆ ಆಗ್ರಹಿಸಿ ಮತ್ತೆ ಹೋರಾಟ ಆರಂಭವಾಗಿದೆ. ಈಗ ಹೊಸ ಸರಕಾರ ಬಂದಿದೆ. 2ಎ ಮೀಸಲಾತಿಗೆ ಸರಕಾರವನ್ನು ಆಗ್ರಹಿಸಲಾಗುತ್ತದೆ. ಈಗಾಗಲೇ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಿಂದ ಹೋರಾಟ ಶುರುವಾಗಿದೆ. ಈಗಾಗಲೇ ಎಲ್ಲ ರೀತಿಯಾದ ಹೋರಾಟ ಮಾಡಲಾಗಿದೆ. ಲಿಂಗಪೂಜೆ ಮೂಲಕ ಹೋರಾಟ ಮಾಡಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲಿಯೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಂತ ಹಂತವಾಗಿ ಹೋರಾಟ ಮಾಡುತ್ತೇವೆ. ಕೇಂದ್ರ ಪಟ್ಟಿಯಲ್ಲಿ ಪಂಚಮಸಾಲಿ ಸಮುದಾಯವನ್ನು ಓಬಿಸಿ ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಬೇಕು. ಹೊಸ ಸರಕಾರ ಬಂದಿರುವುದರಿಂದ ಕಾಂಗ್ರೆಸ್ ಶಾಸಕರ ಮೂಲಕ ಒತ್ತಡ ಹಾಕಲಿ ಎಂದು ಯತ್ನಾಳ್ ಸಲಹೆ ನೀಡಿದ್ದಾರೆ. ವಿಜಯಾನಂದ ಕಾಶಪ್ಪನವರ್ ಶಾಸಕರಾಗಿದ್ದಾರೆ. ಹೀಗಾಗಿ ಹೆಚ್ಚು ನಮ್ಮ ಜೊತೆ ಕಾಣಿಸುತ್ತಿಲ್ಲ. ಮೂರು ವರ್ಷದಿಂದ ಸತತವಾಗಿ ಭಾಗವಹಿಸಿದ್ದಾರೆ ಎಂದು ಸ್ಪಷ್ಠಪಡಿಸಿದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಸನಗೌಡ ತೊಂಡಿಹಾಳ. ತಾಲೂಕಾ ಅಧ್ಯಕ್ಷ ಕರಿಯಪ್ಪ ಮೇಟಿ, ವೀರಣ್ಣ ಅಣ್ಣಿಗೇರಿ, ಕೆ ಜಿ ಪಲ್ಲೇದ. ವೀರಣ್ಣ ಹುಬ್ಬಳ್ಳಿ, ಮಂಜುಳಾ ಕರಡಿ, ಗೀತಾಪಾಟೀಲ. ರುದ್ರಗೌಡ ಬಂಡಿ ಇದ್ದರು.