ಬೆಂಗಳೂರು, ಮೇ 19: ಡಿ.ಕೆ. ಶಿವಕುಮಾರ್ ಮಾದರಿಯಲ್ಲಿ ತಮಗೂ ಉಪಮುಖ್ಯಮಂತ್ರಿ ಸ್ಥಾನ ಕೊಡಲೇಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಒತ್ತಾಯಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷ ಅಧಿಕಾರಕ್ಕೆ ಬರಲು ಎಲ್ಲರೂ ಕೊಡುಗೆ ನೀಡಿದ್ದಾರೆ. ಒಬ್ಬರೇ ಉಪ ಮುಖ್ಯಮಂತ್ರಿ ಆಗಿರಬೇಕು ಎಂದು ಹೇಳಲು ಬರುವುದಿಲ್ಲ. ಡಿ.ಕೆ. ಶಿವಕುಮಾರ್ ಅವರ ಅಭಿಪ್ರಾಯ ಹೇಳಿರುತ್ತಾರೆ. ಎಲ್ಲರೂ ಒಟ್ಟಿಗೆ ಇದ್ದೇವೆ. ಎಲ್ಲರೂ ಸೇರಿ ಅಧಿಕಾರ ನಡೆಸುತ್ತೇವೆ ಎಂದರು.
ಸರ್ಕಾರದಲ್ಲಿ ದಲಿತರ ಪ್ರಾತಿನಿಧ್ಯ ಹೇಗಿರಲಿದೆ ಎಂದು ನೋಡಬೇಕಿದೆ. ಪರಿಶಿಷ್ಟರಿಗೆ ಮೀಸಲಾದ ಒಟ್ಟು 51 ಕ್ಷೇತ್ರಗಳ ಪೈಕಿ 37ರಲ್ಲಿ ಪಕ್ಷದಿಂದ ಸ್ಪರ್ಧಿಸಿದವರು ಗೆದ್ದಿದ್ದೇವೆ. ಬೇರೆ ಕ್ಷೇತ್ರಗಳಲ್ಲೂ ದಲಿತ ಸಮುದಾಯದ ಮತಗಳು ಫಲಿತಾಂಶದ ಮೇಲೆ ಪರಿಣಾಮ ಬೀರಿವೆ ಎಂದರು.
ನಾವು ಶಿಸ್ತಿನ ಸಿಪಾಯಿಗಳು, ಲಾಬಿ ಮಾಡಲ್ಲ. ಆದರೆ ಯಾವ ಸಮುದಾಯದ ಬೆಂಬಲ ದೊರಕಿದೆ ಎಂಬುದನ್ನು ಹೈಕಮಾಂಡ್ ಅರ್ಥ ಮಾಡಿಕೊಳ್ಳಬೇಕು. ರಾಜಸ್ಥಾನದ ರೀತಿ ಇಲ್ಲಿ ಆಗಲು ಬಿಡುವುದಿಲ್ಲ. ಸರ್ಕಾರ ಒಳ್ಳೆಯ ಆಡಳಿತ ನೀಡುವ ನಿರೀಕ್ಷೆ ಜನರಲ್ಲಿದೆ ಎಂದು ಪರಮೇಶ್ವರ್ ಹೇಳಿದರು.
ಈ ಮಧ್ಯೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ೧೩೫ ಸ್ಥಾನಗಳನ್ನು ಗಳಿಸಿರುವ ಕಾಂಗ್ರೆಸ್ ಪಕ್ಷದ ಪರವಾಗಿ ಡಾ. ಜಿ. ಪರಮೇಶ್ವರ್ ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ರ್ಕಾರ ರಚಿಸುವ ಕುರಿತು ಮನವಿಯನ್ನು ಸಲ್ಲಿಸಿದರು. ಕಾಂಗ್ರೆಸ್ ಪ್ರತಿನಿಧಿಯಾಗಿ ತೆರಳಿದ ಡಾ. ಜಿ. ಪರಮೇಶ್ವರ್, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪತ್ರ ಮುಖೇನ ಮನವಿ ಮಾಡಿದರು.