ಸುದ್ದಿಮೂಲ ವಾರ್ತೆ
ಹೊಸಕೋಟೆ, ಆ. 6 : ನಂದಗುಡಿ ಹೋಬಳಿ ತಾವರೆಕೆರೆ ಗ್ರಾಮದಿಂದ ಮಂಚನಹಳ್ಳಿ, ಕಾಳಪ್ಪನಹಳ್ಳಿ, ಬಾಣಮಾಕನಹಳ್ಳಿ, ಬರ್ನಹಳ್ಳಿ, ಹೆತ್ತಕ್ಕಿ ಬಂಡಹಳ್ಳಿ ಲಿಂಗಾಪುರ ಗಂಗಾಪುರ ಹಾಗೂ ಇನ್ನೂ ಅನೇಕ ಗ್ರಾಮಗಳಿಂದ ಶಾಲಾ ಕಾಲೇಜಿಗೆ, ಕೋರ್ಟ್ ಕಚೇರಿ, ಆಸ್ಪತ್ರೆಗಳಿಗೆ ಪ್ರಯಾಣ ಮಾಡುವ ಪ್ರಯಾಣಿಕರ ಸಾಹಸ ಹೇಳತೀರದು.
ಕೆಲವೊಂದು ಕೆಎಸ್ಆರ್ಟಿಸಿ ಬಸ್ಸುಗಳು ಫ್ಲೈ ಓವರ್ ನಿಂದ ಕೆಳಗಡೆ ಬರದೆ ಮೇಲೆಯೆ ಚಲಿಸುತ್ತವೆ. ಕೆಲವೊಂದು ಬಸ್ಸುಗಳು ಕೆಳಗೆ ಬರುತ್ತವೆ. ಈ ಗ್ರಾಮಕ್ಕೆ ಬರುವ ಬಸ್ಸುಗಳು ಕೋಲಾರ ನರಾಸಪುರ ಮುಖಾಂತರ ಗ್ರಾಮಕ್ಕೆ ಬರುತ್ತವೆ. ಸರ್ಕಾರ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿರುವುದರಿಂದ ಎಲ್ಲ ಮಹಿಳೆಯರು ಸರ್ಕಾರಿ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಾರೆ. ಇದಕ್ಕೂ ಮೊದಲು ಅನೇಕರು ಖಾಸಗಿ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದರು. ಉಚಿತ ಆದ ಕಾರಣ ಕೋಲಾರದಲ್ಲೇ ಬಸ್ಸುಗಳು ತುಂಬಿ ನರಾಸಪುರ ನಂತರ ಪ್ರಯಾಣಿಕರು ನಿಂತು ಪ್ರಯಾಣಿಬೇಕಾಗಿದೆ. ಆದ್ದರಿಂದ ತಾವರೆಕೆರೆಗೆ ಬರುವ ವೇಳೆಗೆ ಬಸ್ಸು ಹತ್ತಲೂ ಜಾಗವಿಲ್ಲದೆ ಪರದಾಡುವಂತಾಗಿದೆ.
ಹೀಗಾಗಿ, ಸರಿಯಾದ ಸಮಯಕ್ಕೆ ಶಾಲಾ ಕಾಲೇಜುಗಳಿಗೆ ಹಾಗೂ ಕಚೇರಿ ಸೇರಿದಂತೆ ಇತರೆ ಕಾರ್ಯಗಳಿಗೆ ತೆರಳಲು ತುಂಬಾ ತೊಂದರೆಯಾಗುತ್ತಿದೆ. ಮೊದಲಿಗೆ ಇದೇ ಸ್ಥಳದಲ್ಲಿ ನಿಯಂತ್ರಕರ ಕೊಠಡಿ ಇದ್ದು ಎಲ್ಲಾ ಬಸ್ಸುಗಳು ಒಳಗಡೆ ಬಂದು ಎಂಟ್ರಿ ಮಾಡಿಸಿಕೊಂಡು ಹೋಗುತ್ತಿದ್ದರು. ಈಗ ಟಿಸಿ ಪಾಯಿಂಟ್ ಇದ್ದು ಇಲ್ಲದಂತಾಗಿದೆ. ನಿಯಂತ್ರಕರು ಸಹ ಇರುವುದಿಲ್ಲ. ಇದರಿಂದ ಅನೇಕ ಬಸ್ಸುಗಳು ಫ್ಲೈ ಓವರ್ ಮೇಲೆ ಚಲಿಸಿ ಅನೇಕ ಪ್ರಯಾಣಿಕರಿಗೆ ತೊಂದರೆ ಉಂಟುಮಾಡುತ್ತಿದ್ದಾರೆ. ಆಸ್ಪತ್ರೆಗೆ ಹೋಗುವ ಅನೇಕ ರೋಗಿಗಳು ಪ್ರಯಾಣಿಕರ ದಟ್ಟಣೆ ಇರುವುದರಿಂದ ಬಸ್ಸು ಹತ್ತಲು ಆಗದೆ ಆಸ್ಪತ್ರೆಗೆ ಹೋಗಲು ಆಗದೆ ನರಕಯಾತನೆ ಅನುಭವಿಸುತ್ತಿದ್ದಾರೆ.
ಹೀಗಾಗಿ, ಸಂಬಂಧಪಟ್ಟ ಕೆಎಸ್ಆರ್ಟಿಸಿ ಮೇಲಾಧಿಕಾರಿಗಳು ವಾಹನ ಚಾಲಕ ನಿರ್ವಾಹಕರಿಗೆ ಸೂಚನೆ ನೀಡಿ ಎಲ್ಲಾ ಬಸ್ಸುಗಳು ಊರಿನ ಬಸ್ಸು ನಿಲ್ದಾಣಕ್ಕೆ ಬಂದು ಹೋಗಲು ಸೂಚನೆ ನೀಡಬೇಕು. ಇಲ್ಲವೆಂದರೆ ಗ್ರಾಮಸ್ಥರು ಬಸ್ ತಡೆದು ಮುಷ್ಕರ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಪ್ರತಿನಿತ್ಯ ಕಾಲೇಜಿಗೆ ಹೋಗುತ್ತಿದ್ದು ಬಸ್ಸುಗಳು ಫ್ಲೈ ಓವರ್ ಕೆಳಗೆ ಬರದೆ ಮೇಲೆ ಸಂಚರಿಸುತ್ತವೆ. ಶಕ್ತಿ ಯೋಜನೆಯಿಂದ ಬಸ್ಸುಗಳು ಪ್ರಯಾಣಿಕರು ತುಂಬಿರುತ್ತಾರೆ. ಸರಿಯಾದ ಸಮಯಕ್ಕೆ ಬಸ್ಸಿಲ್ಲದೆ ಒಂದೊಂದು ದಿನ ವಾಪಸ್ಸು ಮನೆಗೆ ಹೋಗಬೇಕಾಗುತ್ತದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಒಬ್ಬ ನಿಯಂತ್ರಕರನ್ನು ನಿಯೋಜಿಸಿ ನಮಗೆ ಅನುಕೂಲ ಮಾಡಿಕೊಡಬೇಕು ಎಂದು ಕಾಲೇಜು ವಿದ್ಯಾರ್ಥಿನಿ ಪ್ರತಿಭಾ ಒತ್ತಾಯಿಸಿದ್ದಾರೆ.