ಸುದ್ದಿಮೂಲ ವಾರ್ತೆ
ಬೆಂಗಳೂರು, ನ. 24 : ನಗರದ ಪೂರ್ವ ವಲಯ ವ್ಯಾಪ್ತಿಯಲ್ಲಿ ಬರುವ 6 ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಹಾಗೂ ಅನಧಿಕೃತವಾಗಿ ಅಳವಡಿಸಿರುವ ಓಎಫ್ಸಿ ಕೇಬಲ್ ಗಳ ತೆರವು ಕಾರ್ಯಾಚರಣೆಯನ್ನು ನಡೆಸಲಾಗಿದೆ.
ನಗರದ ಪೂರ್ವ ವಲಯ ವ್ಯಾಪ್ತಿಯಲ್ಲಿ ವಲಯ ಆಯುಕ್ತರಾದ ಸ್ನೇಹಲ್ ಆದೇಶದಂತೆ, ಜಂಟಿ ಆಯುಕ್ತರಾದ ಕೆ.ಆರ್ ಪಲ್ಲವಿ ರವರ ನೇತೃತ್ವದಲ್ಲಿ ಪಾದಚಾರಿ ಮಾರ್ಗಗಳಲ್ಲಿ ಅನಧಿಕೃತ ಓ.ಎಫ್.ಸಿ. ಕೇಬಲ್ಗಳ ತೆರವು ಕಾರ್ಯಾಚರಣೆಯನ್ನು 6 ವಿಧಾನ ಸಭಾ ಕ್ಷೇತ್ರಗಳಾದ ಶಾಂತಿನಗರ, ಶಿವಾಜಿನಗರ, ಸಿ.ವಿ.ರಾಮನ್ನಗರ, ಪುಲಿಕೇಶಿನಗರ, ಸರ್ವಜ್ಞನಗರ ಮತ್ತು ಹೆಬ್ಬಾಳ ವ್ಯಾಪ್ತಿಯಲ್ಲಿ ನಡೆಸಲಾಗಿದೆ. ಪಾದಚಾರಿ ಮಾರ್ಗದಲ್ಲಿ ಒತ್ತುವರಿಯಾಗಿರುವ ಅಂಗಡಿ ಮಳಿಗೆಗಳ ಮೇಲ್ಚಾವಣಿ, ಅನುಪಯುಕ್ತ ತಳ್ಳುವ ಗಾಡಿ ಹಾಗೂ ಅನಧಿಕೃತವಾಗಿ ಅಳವಡಿಸಿರುವ ಓ.ಎಫ್.ಸಿ. ಕೇಬಲ್ಗಳ ತೆರವು ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಅದರಂತೆ, ಪೂರ್ವ ವಲಯ ವ್ಯಾಪ್ತಿಯಲ್ಲಿ 6 ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಚಾರಿ ಮಾರ್ಗ ಹಾಗೂ ಒ.ಎಫ್.ಸಿ ಕೇಬಲ್ ತೆರವುಕಾರ್ಯಾಚರಣೆಯಲ್ಲಿ, 7.85 ಕಿ.ಮೀ ವ್ಯಾಪ್ತಿಯ ರಸ್ತೆಯಲ್ಲಿ 104 ಅನುಪಯುಕ್ತ ತಳ್ಳುವ ಗಾಡಿ ಜಪ್ತಿ ಮಾಡಲಾಗಿದೆ. 36 ಪಾದಚಾರಿ ಮಾರ್ಗಕ್ಕೆ ಚಾಚಿಕೊಂಡ ಅಂಗಡಿ ಮುಂಗಟ್ಟುಗಳ ಮೇಲ್ಚಾವಣಿ, 52 ಅನಧಿಕೃತ ನಾಮಫಲಕಗಳು, 3700 ಮೀಟರ್ ಅನಧಿಕೃತ ಒ.ಎಫ್.ಸಿ ಕೇಬಲ್ಗಳು ಹಾಗೂ 2 ಅನಧಿಕೃತ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಲಾಗಿದೆ.
ಸಾರ್ವಜನಿಕರ ಸುರಕ್ಷತೆ ಮತ್ತು ವಾಹನ ಸವಾರರ ಸಂಚಾರಕ್ಕೆ ಯಾವುದೇ ತೊಂದರೆಯಾಗದಿರಲು ಪಾದಚಾರಿ ಮಾರ್ಗದಲ್ಲಿ ಒತ್ತುವರಿಯಾಗಿರುವ ಅಂಗಡಿ ಮಳಿಗೆ, ತಳ್ಳುವ ಗಾಡಿ ಹಾಗೂ ಅನಧಿಕೃತ ಓ.ಎಫ್.ಸಿ ಕೇಬಲ್ ತೆರವುಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅನಧಿಕೃತ ಕೇಬಲ್ಗಳನ್ನು ಅಳವಡಿಸಿದಲ್ಲಿ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿ ಸಂಬಂಧಪಟ್ಟ ಸಂಸ್ಥೆಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಜೊತೆಗೆ ಅನಧಿಕೃತ ಕೇಬಲ್ ತೆರವು ಕಾರ್ಯಾಚರಣೆಗೆ ಸಂಚಾರ ಪೊಲೀಸ್ ವಿಭಾಗ ಹಾಗೂ ಸಾರ್ವಜನಿಕರು ಸಹಕರಿಸುವಂತೆ ವಲಯ ಜಂಟಿ ಆಯುಕ್ತರಾದ ಕೆ.ಆರ್ ಪಲ್ಲವಿ ರವರು ಕೋರಿರುತ್ತಾರೆ.
ತೆರವು ಕಾರ್ಯಾಚರಣೆಯ ವೇಳೆ ವಲಯ ಮುಖ್ಯ ಅಭಿಯಂತರರಾದ ಸುಗುಣಾ, ಅಧೀಕ್ಷಕ ಅಭಿಯಂತರರು. ಪಾಲಿಕೆ ಅಧಿಕಾರಿಗಳು, ಮಾರ್ಷಲ್ಗಳು ಸೇಇರದಂತೆ ಇನ್ನಿತರರು ಉಪಸ್ಥಿತರಿದ್ದರು.