ಬಳ್ಳಾರಿ, ಜು. 10:ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂ ಮಾಡಬೇಕು ಮತ್ತು ಬಾಕಿ ಇರುವ ವೇತನವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಬೇಕು ಎಂದು
ಕರ್ನಾಟಕ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಆಗ್ರಹಿಸಿದೆ.
ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಡಿದ, ಅತಿಥಿ ಉಪನ್ಯಾಸಕ ಸಂಘದ ಜಿಲ್ಲಾಧ್ಯಕ್ಷ
ಡಾ. ಟಿ, ರುದ್ರಪ್ಪ ಅವರು, ಕರ್ನಾಟಕದಲ್ಲಿ ಸುಮಾರು 11 ಸಾವಿರಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಮೂಲಕ ಸಮಾಜ ನಿರ್ಮಾಣ ಮಾಡುತ್ತಿದ್ದಾರೆ.
ಆದರೆ, ಸಮಾಜ ನಿರ್ಮಾಣ ಮಾಡುವ, ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸುವ ಮತ್ತು ದೇಶ ಸೇವೆ ಮಾಡುವ ಜವಾಬ್ದಾರಿ ಹೊತ್ತಿರುವ ಅತಿಥಿ ಉಪನ್ಯಾಸಕರ ಭವಿಷ್ಯವೇ ಅತಂತ್ರದ ಸ್ಥಿತಿಯಲ್ಲಿದೆ. ಅತಿಥಿ ಉಪನ್ಯಾಸಕ ಸೇವಾ ಭದ್ರತೆ ಇಲ್ಲದಂತಾಗಿ ಅನೇಕ ಒತ್ತಡಗಳ ಮಧ್ಯೆ ಅವರು ಕರ್ತವ್ಯ ನಿರ್ವಹಿಸುತ್ತಿರುವುದು ಆತಂಕಕಾರಿ ಸಂಗತಿ ಎಂದು ತಿಳಿಸಿದ್ದಾರೆ.
ಬಿಜೆಪಿಯ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ನಡೆದ ಹೋರಾಟದ ಪ್ರತಿಫಲವಾಗಿ
ಅತಿಥಿ ಉಪನ್ಯಾಸಕರ ಸೇವೆಯನ್ನು ಸರ್ಕಾರ ಪೂರ್ಣಕಾಲಿಕವಾಗಿ ಪರಿಗಣಿಸಿದೆ. ಆದರೆ, ಸ್ಲಾಬ್ಗಳಲ್ಲಿ ಗೌರವಧನವನ್ನು ಪಾವತಿಸುತ್ತಾ ಬೋಧನಾ ಕಾರ್ಯಭಾರವನ್ನು ಹೆಚ್ಚು ಮಾಡಿದೆ. ಕೆಲಸಕ್ಕೆ ತಕ್ಕಂತೆ ಸಂಭಾವನೆ ಸಿಗುತ್ತಿಲ್ಲ. ತಾರತಮ್ಯದ ವೇತನ ದೊರೆಯುತ್ತಿದೆ. ಅತಿಥಿ ಉಪನ್ಯಾಸಕರಲ್ಲಿ ವಯೋಮಿತಿ ಮೀರುತ್ತಿದೆ ಎಂದರು.
ಅತಿಥಿ ಉಪನ್ಯಾಸಕರಾದ, ಜೋಳದರಾಶಿ ಹನುಮೇಶ, ಎಸ್.ಎಂ. ರಮೇಶ್, ಸಿದ್ದೇಶ್, ಮಾರೆಪ್ಪ, ಗಿರೀಶ್ ಕುಮಾರ್ ಗೌಡ, ಗುರುರಾಜ್ ಇನ್ನಿತರರು ಉಪಸ್ಥಿತರಿದ್ದರು.