ಸುದ್ದಿಮೂಲವಾರ್ತೆ
ಕೊಪ್ಪಳ,ಆ.31: ಕೊಪ್ಪಳ ಸಂಸದ ಸಂಗಣ್ಣ ಕರಡಿಯವರ ಟೂರ್, ಅವರಿಂದ ಆಗಬೇಕಾದ ಕೆಲಸ. ಕ್ಷೇತ್ರದಲ್ಲಿ ಸಂಸದರ ಕಾರ್ಯ ವ್ಯಾಪ್ತಿಯ ಯೋಜನೆಗಳ ಮಾಹಿತಿ ಏನೇ ಬೇಕಾದರೂ ತಕ್ಷಣ ಫೋನು ಸಂಪರ್ಕಿಸಿ ಮಾಹಿತಿ ಪಡೆಯುತ್ತಿದ್ದು ಶ್ರೀನಿವಾಸ ಜೋಶಿಯವರನ್ನು. ಸಂಸದ ಕಚೇರಿಯ ರೂಪಕೊಟ್ಟಿದ್ದು ಜೋಶಿ. ಕಳೆದ 14.50 ವರ್ಷದಿಂದ ಸಂಸದರ ಕಚೇರಿಯಲ್ಲಿ ಆಪ್ತ ಸಹಾಯಕರಾಗಿದ್ದ ಜೋಶಿ ಇಂದು ವಯೋನಿವೃತ್ತಿ ಹೊಂದುತ್ತಿದ್ದಾರೆ. 39 ವರ್ಷದ ಸಾರ್ಥಕ ವೃತ್ತಿ ಬದುಕು ನಿಂದ ನಿವೃತ್ತಿ ಹೊಂದುತ್ತಿದ್ದಾರೆ.
ಮೂಲತಃ ಕುಷ್ಟಗಿ ಪಟ್ಟಣದವರಾದ ಶ್ರೀನಿವಾಸ ಜೋಶಿಯರ ತಂದೆ ನಾರಾಯಣಾಚಾರ್ಯ, ತಾಯಿ ಲಕ್ಷ್ಮಿದೇವಿ. ಶ್ರೀನಿವಾಸ ಜೋಶಿ 5 ವರ್ಷದವರಾಗಿದ್ದಾಗ ತಂದೆ ನಿಧನರಾದರು. ತಾಯಿಯ ಆಸರೆಯಲ್ಲಿ ಬೆಳೆದರು. ಪದವಿ ಶಿಕ್ಷಣ ಪಡೆಯುತ್ತಿರುವಾಗಲೇ ಅವರಿಗೆ ತಂದೆಯ ಅನುಕಂಪದ ನೌಕರಿ ಬಂದಿದೆ. ಅಲ್ಲಿಂದ ಜೋಶಿ 1984 ರಲ್ಲಿ ಮಂಗಳೂರು ಸರಕಾರಿ ಪ್ರೌಢ ಶಾಲೆಯ ದ್ವಿತೀಯ ಸಹಾಯಕರಾಗಿ ಸರಕಾರಿ ನೌಕರಿಯನ್ನು ಸೇರಿದ್ದಾರೆ.
ಮಂಗಳೂರು ನಂತರ ಕೊಪ್ಪಳ, ಸಿಂಧನೂರು ಬಿಇಒ ಕಚೇರಿ, ರಾಯಚೂರು ಡಿಡಿಪಿಐ ಕಚೇರಿಯಲ್ಲಿ ಕೆಲಸ ಮಾಡಿ ನಂತರ ಕೊಪ್ಪಳ ಜಿಲ್ಲಾ ಪಂಚಾಯತ್ ಯಲ್ಲಿ ಕೆಲಸ ಮಾಡುತ್ತಿದ್ದರು. 2009 ರಲ್ಲಿ ಅಂದಿನ ಸಂಸದರಾದ ಶಿವರಾಮಗೌಡರ ತಮ್ಮ ಸಂಸದರ ಕಚೇರಿಗೆ ಆಪ್ತಸಹಾಯಕರನ್ನಾಗಿ ನೇಮಿಸಿಕೊಂಡರು. ಅಲ್ಲಿಂದ ಈಗಿನವರೆಗೂ ಕೊಪ್ಪಳ ಸಂಸದರ ಕಚೇರಿಯಲ್ಲಿ ಸಂಸದರ ಆಪ್ತ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.
ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅಂಬುಜಾರನ್ನು ವಿವಾಹವಾಗಿದ್ದ ಅವರಿಗೆ ಮೆಕಾನಿಕಲ್ ಇಂಜನೀಯರ್ ಆಗಿರುವ ಹರಿಪ್ರಸಾದ ಹಾಗು ಸಾಫ್ಟ್ ವೇರ್ ಇಂಜನೀಯರ್ ಆಗಿರುವ ಕಾರ್ತಿಕ ಎಂಬ ಇಬ್ಬರು ಮಕ್ಕಳಿದ್ದಾರೆ. ಪತ್ನಿಯು ಎರಡು ವರ್ಷಗಳ ಹಿಂದೆ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಈಗ ಇಬ್ಬರು ನಿವೃತ್ತಿ ಜೀವನವನ್ನು ಮಕ್ಕಳ ಏಳ್ಗೆಗಾಗಿ ಶ್ರಮಿಸಲು ಮುಂದಾಗಿದ್ದಾರೆ.
ಮೊದಲಿನಿಂದಲೂ ಸಂಗೀತದಲ್ಲಿ ಆಸಕ್ತಿ ಇರುವ ಜೋಶಿವರು 2005 ರಲ್ಲಿ ತಬಲಾ ವಾದನವನ್ನು ಕಲಿತಿದ್ದಾರೆ. ಸಮಯ ಸಿಕ್ಕಾಗ ಸಂಗೀತ ಕಾರ್ಯಕ್ರಮಗಳಲ್ಲಿ ತಬಲಾ ನುಡಿಸುತ್ತಾರೆ.
ಸಂಸದರ ಕಚೇರಿಗೆ ರೂಪ ಕೊಟ್ಟಿದ್ದ ಅವರು ಯಾವುದೇ ಮಾಹಿತಿ ಬೇಕಿದ್ದರು ಸರಿಯಾದ ಮಾಹಿತಿಯನ್ನು ದಾಖಲೆ ಪ್ರಕಾರ ನೀಡುತ್ತಿದ್ದರು. ಕಚೇರಿಯಲ್ಲಿ ದಾಖಲೆಗಳು ಸಂಸದರ ದೆಹಲಿಯಲ್ಲಿ ದಾಖಲೆಗಳ ಕುರಿತು ಸಹ ಅಚ್ಚುಕಟ್ಟಾಗಿ ಜೋಡಿಸುತ್ತಿದ್ದ ಅವರು ಸಂಸದರ ಕಚೇರಿಗೆ ಬರುವವರನ್ನು ಆತ್ಮೀಯವಾಗಿ ಕಂಡು ಅವರ ಕೆಲಸಗಳನ್ನು ಯಾವುದೇ ಬೇಸರವಿಲ್ಲದೆ ಮಾಡಿಕೊಡುತ್ತಿದ್ದರು. ಅವರ ಸೇವೆಯನ್ನು ಪರಿಗಣಿಸಿ ಕೊಪ್ಪಳ ಜಿಲ್ಲಾಡಳಿತ 2015 ರಲ್ಲಿ ಸೇವಾ ಸರ್ವೋತ್ತಮ ಪ್ರಶಸ್ತಿ ನೀಡಿ ಗೌರವಿಸಿದೆ.
ತಮ್ಮ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ತೃಪ್ತಿ ಕೊಟ್ಟ ಕೆಲಸ ವೆಂದರೆ ಸಂಸದರ ಕ್ಷೇತ್ರ ವ್ಯಾಪ್ತಿಯಲ್ಲಿ ಆಗಿರುವ ರೈಲ್ವೆ ಕಾಮಗಾರಿ. ಮಹಿಬೂಬನಗರ ಮುನಿರಾಬಾದ್ ರೈಲು ಮಾರ್ಗ. ಕೊಪ್ಪಳ ಜಿಲ್ಲೆಯಲ್ಲಿ ನಾಲ್ಕು ಹೊರತು ಪಡಿಸಿ ಎಲ್ಲಾ ಕಡೆ ರೈಲ್ವೆ ಸೇತುವೆಗಳ ನಿರ್ಮಾಣ. ಸಾಕಷ್ಟು ರೈಲ್ವೆ ಸೇವೆಗಳು ಆರಂಭ. ಕೊಪ್ಪಳ ರೈಲು ನಿಲ್ದಾಣ ಅಭಿವೃದ್ಧಿ ಕಾರ್ಯಗಳು ತೃಪ್ತಿ ನೀಡಿವೆ ಎನ್ನುತ್ತಾರೆ.
ಅವರನ್ನು ಸಂಸದರ ಕಚೇರಿಯಲ್ಲಿ ಸಂಸದ ಸಂಗಣ್ಣ ಕರಡಿ ಆತ್ಮೀಯವಾಗಿ ಬಿಳ್ಕೊಟ್ಟಿದ್ದು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಜೋಶಿಯವರು ಇಲಾಖೆಯ ಸಂಬಂಧಿಸಿದ ಯೋಜನೆಗಳನ್ನು ಜಗಳವಾಡಿಯಾದರೂ ಮಂಜೂರು ಮಾಡಿಸುತ್ತಿದ್ದರು. ತಮ್ಮೊಂದಿಗೆ 9.5 ವರ್ಷ ಕೆಲಸ ಮಾಡಿ ನನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದಿದ್ದಾರೆ.
ಸದಾ ಚಟುವಟಿಕೆಯಿಂದ ಇರುವ ಶ್ರೀನಿವಾಸ ಜೋಶಿಯವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಅವರ ಸ್ನೇಹಿತರು ಹಿತೈಸಿಗಳು ಶುಭ ಹಾರೈಸುತ್ತಿದ್ದಾರೆ.