ಸುದ್ದಿಮೂಲ ವಾರ್ತೆ
ಮೈಸೂರು, ಜು.29: ದಿನದಿಂದ ದಿನಕ್ಕೆ ನಗರದಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಆದೇಶದ ಮರು ಪರಿಶೀಲನೆಗೆ ಮನವಿ ಮಾಡಲು ಮಹಾ ನಗರಪಾಲಿಕೆ ನಿರ್ಧರಿಸಿದೆ.
ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಕೌನ್ಸಿಲ್ ಸಭೆಯಲ್ಲಿ ಬೀದಿನಾಯಿಗಳ ಹಾವಳಿ ಬಗ್ಗೆ ಗಂಭೀರ ಚರ್ಚೆ ನಡೆದು, ಎಲ್ಲಾ ಸದಸ್ಯರು ಪಕ್ಷಭೇದ ಮರೆತು ಕ್ರಮಕ್ಕೆ ಒತ್ತಾಯಿಸಿದರು.
ಸಭೆಯಲ್ಲಿ ಮಾತನಾಡಿದ ಸದಸ್ಯೆ ಅಶ್ವಿನಿ ಅನಂತು, ಬೀದಿ ನಾಯಿಗಳು ಗುಂಪು ಕಟ್ಟಿಕೊಂಡು ದಾಳಿ ಮಾಡುತ್ತಿವೆ. ಯಾರಿಗೆ ಕರೆ ಮಾಡುವುದು ಗೊತ್ತಾಗುತ್ತಿಲ್ಲ. ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ಪ್ರೇಮಾ ಶಂಕರೇಗೌಡ, ರಸ್ತೆಯಲ್ಲಿ ಓಡಾಡಲು ಭಯವಾಗುತ್ತದೆ. ಸ್ವತಃ ನನಗೆ ಬೀದಿನಾಯಿಯೊಂದು ಕಚ್ಚಿದೆ. ಎಂದರು.
ಪ್ರಮೀಳಾ ಭರತ್ ಮಾತನಾಡಿ, ಮಕ್ಕಳು, ಹಿರಿಯರು ಎನ್ನದೆ ಎಲ್ಲಾ ವಯೋಮಾನದವರು ಬೀದಿನಾಯಿ ದಾಳಿಗೆ ತುತ್ತಾಗುತ್ತಿದ್ದಾರೆ. ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ಮೇಯರ್ ಶಿವಕುಮಾರ್, ಸುಪ್ರೀಂಕೋರ್ಟ್ ಆದೇಶದ ಪ್ರಕಾರ ನಾಯಿಗಳಿಗೆ ಎಲ್ಲಾ ಪ್ರಾಣಿಗಳಂತೆ ಬದುಕುವ ಹಕ್ಕಿದೆ. ಇವುಗಳನ್ನು ಕೂಡಿ ಹಾಕುವುದು, ಬೇರೆಲ್ಲೋ ಬಿಡುವಂತಿಲ್ಲ. ಕಾಯಿಲೆ ಪೀಡಿತ ನಾಯಿಯಾದರೂ ಚಿಕಿತ್ಸೆ ಕೊಡಿಸಿ ಮತ್ತೆ ಅದೇ ಜಾಗಕ್ಕೆ ಬಿಡಬೇಕು. ಆರೋಗ್ಯವಂತ ನಾಯಿಗಳನ್ನು ಪುನರ್ವಸತಿ ಕೇಂದ್ರದಲ್ಲಿ ಬಿಡುವಂತಿಲ್ಲ. ಹಾಗಾಗಿ ಸುಪ್ರೀಂ ಕೋರ್ಟ್ ತೀರ್ಪು ಪರಿಶೀಲಿಸಲು ಹಾಗೂ ಪರ್ಯಾಯ ಸಲಹೆ ನೀಡುವ ಬಗ್ಗೆ ಚರ್ಚೆ ನಡೆಸಿ ಕೋರ್ಟಿಗೆ ಮನವಿ ಮಾಡೋಣ ಎಂದು ಹೇಳಿದರು. ಇದಕ್ಕೆ ಎಲ್ಲಾ ಸದಸ್ಯರು ಸಹಮತ ವ್ಯಕ್ತಪಡಿಸಿದರು.