ಸುದ್ದಿಮೂಲ ವಾರ್ತೆ
ಬೆಂಗಳೂರು,ಮೇ.2: ಪಿಎಫ್ಐ ಒತ್ತಡದಿಂದ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ನ ಪ್ರಣಾಳಿಕೆ ಸಿದ್ದಗೊಂಡಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ಹೇಳಿದರು.
ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದಾಗಿ ಕರ್ನಾಟಕ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿರುವುದು ಐತಿಹಾಸಿಕ ನಿರ್ಧಾರವಾಗಿದೆ. ಇದು, ದೇಶಾದ್ಯಂತ ಏಕರೂಪ ನೀತಿ ಜಾರಿಗೊಳ್ಳಲು ರಾಷ್ಟ್ರವ್ಯಾಪಿ ಒತ್ತಡಕ್ಕೆ ಹಾದಿ ಮಾಡಿಕೊಡಲಿದೆ. ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಸಹ ಇಂದಿನ ತುರ್ತು ಅಗತ್ಯವಾಗಿದೆ ಎಂದು ತಿಳಿಸಿದರು.
ಆಧಾರ್ನಿಂದ ಪೌರತ್ವ ದೃಢೀಕರಣವಾಗುವುದಿಲ್ಲ. ಆಧಾರ್ ಸ್ವಾತಂತ್ರ್ಯ ಬಂದು 76 ವರ್ಷಗಳಾದರೂ ದೇಶದಲ್ಲಿ ಎನ್ಆರ್ಸಿ ಜಾರಿಯಾಗಿಲ್ಲ. ಸುದೀರ್ಘ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಇಂದಿನವರೆಗೆ ಈ ಬಗ್ಗೆ ಚಕಾರವೆತ್ತಿಲ್ಲ. ಎನ್ಆರ್ಸಿ ಜಾರಿಗೆ ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ತೆಗೆದುಕೊಂಡ ಕ್ರಮವು, ರಾಷ್ಟ್ರವ್ಯಾಪಿ ಎನ್ಆರ್ಸಿ ಜಾರಿಗೊಳ್ಳಲು ರಾಷ್ಟ್ರವ್ಯಾಪಿ ಒತ್ತಡಕ್ಕೆ ಹಾದಿ ಮಾಡಿಕೊಡಲಿದೆ ಎಂದು ಹೇಳಿದರು.
ಬಜರಂಗದಳವನ್ನು ನಿಷೇಧಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿರುವ ಕಾಂಗ್ರೆಸ್, ಪಿಎಫ್ಐ ಅನ್ನು ಏಕೆ ನಿಷೇಧಿಸಿರಲಿಲ್ಲ ಎಂದು ಪ್ರಶ್ನಿಸಿದ ಬಿಸ್ವಾಸ್ ಅವರು, ಕಾಂಗ್ರೆಸ್ ಇಂಡಿಯನ್ ಮುಸ್ಲಿಂ ಲೀಗ್ನೊಂದಿಗೆ ಮೈತ್ರಿ ಹೊಂದಿದೆ. ಕಾಂಗ್ರೆಸ್, ಜಾತ್ಯತೀತ ಪಕ್ಷವಲ್ಲ. 40 ಪರ್ಸೆಂಟ್ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಆದರೆ, ಬೋಫೋರ್ಸ್ ಎಷ್ಟು ದೊಡ್ಡ ಹಗರಣ ಎಂಬುದನ್ನು ಕಾಂಗ್ರೆಸ್ ಅವಲೋಕಿಸಬೇಕು ಎಂದು ಹೇಳಿದರು.
ಗ್ಯಾರಂಟಿ ನೀಡಲು ರಾಹುಲ್ ಗಾಂಧಿ ಯಾರು ಎಂದು ಪ್ರಶ್ನಿಸಿದ ಬಿಸ್ವಾಸ್ ಅವರು, ರಾಹುಲ್ ಗಾಂಧಿ ಸಂಸದರೂ ಅಲ್ಲ. ಅವರ ಬಗ್ಗೆ ಅವರಿಗೇ ಗ್ಯಾರಂಟಿ ಇಲ್ಲ. ಅವರು ಗ್ಯಾರಂಟಿ ನಿಜವಾಗಿದ್ದರೆ, ಅಮೇಥಿ ಅಭಿವೃದ್ಧಿಯಾಗಬೇಕಿತ್ತು. ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲಸಬೇಕಿತ್ತು. ರಾಮಮಂದಿರ,ಬಾಬರಿ ಮಸೀದಿ ವಿವಾದ ಇತ್ಯರ್ಥವಾಗಬೇಕಿತ್ತು. ಕರ್ನಾಟಕ ಜನರ ಪ್ರತಿಭೆ, ಪರಿಶ್ರಮದಿಂದ ರಾಜ್ಯ ಮುಂಚೂಣಿಯಲ್ಲಿದೆ. ರಾಹುಲ್ ಗಾಂಧಿ ಗ್ಯಾರಂಟಿಗಳಿಂದಲ್ಲ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯು ಪಿಎಫ್ಐ ಮತ್ತು ಮೂಲಭೂತವಾದಿ ಸಂಘಟನೆಗಳ ಪ್ರಣಾಳಿಕೆಯಂತಿದೆ. ಕಾಂಗ್ರೆಸ್ ಪಕ್ಷ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದ ಪಿಎಫ್ಐ ಮೇಲಿನ ಪ್ರಕರಣಗಳನ್ನು ಹಿಂಪಡೆದು, ಆ ಸಂಘಟನೆಯ 1,700 ಕಾರ್ಯಕರ್ತರನ್ನು ಬಿಡುಗಡೆ ಮಾಡಿತ್ತು ಎಂದು ಅವರು ಟೀಕಿಸಿದರು.
ಕರ್ನಾಟಕ ನಂ.1 ರಾಜ್ಯವಾಗಲು ಬಿಜೆಪಿಗೆ, ನರೇಂದ್ರ ಮೋದಿಯವರಿಗೆ, ಭಾರತಕ್ಕೆ, ಕರ್ನಾಟಕಕ್ಕೆ ಮತ ನೀಡಬೇಕು. ಈ ಬಾರಿ ಬಿಜೆಪಿ 150 ಸ್ಥಾನ ಗೆಲ್ಲುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ತೆಗೆದುಹಾಕಿ ಹಿಂದುಳಿದ ವರ್ಗಗಳಿಗೆ ಹಂಚುವ ಕರ್ನಾಟಕ ಸರ್ಕಾರದ ಕ್ರಮವೂ ಐತಿಹಾಸಿಕ. ಸಂವಿಧಾನದಲ್ಲಿ ಧಾರ್ಮಿಕ ಆಧಾರದಡಿ ಮೀಸಲಾತಿಗೆ ಅವಕಾಶವಿಲ್ಲ. ಡಾ.ಅಂಬೇಡ್ಕರ್ ಅವರು ಇದಕ್ಕೆ ವಿರುದ್ಧವಾಗಿದ್ದರು. ಮುಸ್ಲೀಮರಿಗೆ ಶೇ.4ರಷ್ಟು ಮೀಸಲಾತಿ ನೀಡುವ ಮೂಲಕ ಕಾಂಗ್ರೆಸ್ ಪಕ್ಷ ಮೀಸಲಾತಿಯ ಮೂಲ ಸ್ವರೂಪವನ್ನು ಮತ್ತು ಸಂವಿಧಾನದ ಪ್ರಮುಖ ತತ್ವವನ್ನು ಕೊಲ್ಲಲು ಪ್ರಯತ್ನಿಸಿದೆ ಎಂದು ಅವರು ಆರೋಪಿಸಿದರು.
ಕರ್ನಾಟಕಕ್ಕೆ ಭೇಟಿ ನೀಡಿದ ಸಂದರ್ಭಗಳಲ್ಲಿ ಜಗಜ್ಯೋತಿ ಬಸವಣ್ಣ, ಕೆಂಪೇಗೌಡ, ಕಿತ್ತೂರು ರಾಣಿ ಚನ್ನಮ್ಮ ನಂತಹ ಮಹನೀಯರ ಬಗ್ಗೆ ತಿಳಿದಿದ್ದೇನೆ. ಆದರೆ, ಈ ಮಹನೀಯರು ತಮ್ಮ ರಾಜ್ಯ ಅಸ್ಸಾಂ ಸೇರಿದಂತೆ ಕರ್ನಾಟಕ ಹೊರಗೆ ಪರಿಚಯವೇ ಇಲ್ಲ. ನಮ್ಮ ಪಠ್ಯಪುಸ್ತಕಗಳಲ್ಲಿ ಬಾಬರ್, ಔರಂಗಜೇಬ್ ಟಿಪ್ಪು ಅಂತವರ ಚರಿತ್ರೆ ಇದೆ. ಆದರೆ, ಬಸವಣ್ಣ, ಕೆಂಪೇಗೌಡ, ಕಿತ್ತೂರು ರಾಣಿ ಚೆನ್ನಮ್ಮನವರ ಬಗ್ಗೆ ಇಲ್ಲ. ಪ್ರಧಾನಿ ನರೇಂದ್ರಮೋದಿಯವರು ಎಲ್ಲ ಭಾಗದ ಮಹನೀಯರನ್ನು ದೇಶಕ್ಕೆ ಪರಿಚಯಿಸಿ, ಅವರ ಸಾಧನೆ, ತ್ಯಾಗಗಳ ಬಗ್ಗೆ ತಿಳಿಸುವ ಕೆಲ ಮಾಡುತ್ತಿದ್ದಾರೆ ಎಂದು ಅವರು ಹೇಳಿದ.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಚುನಾವಣಾ ನಿರ್ವಹಣಾ ಸಂಚಾಲಕಿ ಮತ್ತು ಕೇಂದ್ರ ಸಚಿವೆ ಕು.ಶೋಭಾ ಕರಂದ್ಲಾಜೆ, ಬಿಜೆಪಿ ರಾಷ್ಟ್ರೀಯ ಮಾಧ್ಯಮ ಸಹ ಸಂಚಾಲಕ ಸಂಜಯ್ ಮಯೂಕ್, ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ಉಪಸ್ಥಿತರಿದ್ದರು.