ಸುದ್ದಿಮೂಲ ವಾರ್ತೆ
ಮೈಸೂರು, ಜೂ.14:ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳು ನಗರದ ಶ್ರೀ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಹೈಟೆಕ್ ಶಿಶು ಆರೈಕೆ ಕೇಂದ್ರವನ್ನು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ರಿಷಿಕಾ ಕುಮಾರಿ ಒಡೆಯರ್ ಬುಧವಾರ ಉದ್ಘಾಟಿಸಿದರು.
ಈ.ಮೃಗಾಲಯಕ್ಕೆ ಪ್ರತಿವರ್ಷ 40 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಶಿಶು ಆರೈಕೆ ಕೇಂದ್ರವನ್ನು ತೆರೆದಿದ್ದು, ಮೈಸೂರು ಅಮಿಟಿ 108 ಲೇಡೀಸ್ ಗ್ರೂಪ್ನ ಮೈಸೂರು ವಿಭಾಗದ ವತಿಯಿಂದ ಸುಮಾರು 11 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
ಲೇಡೀಸ್ ಗ್ರೂಪ್ ಅಧ್ಯಕ್ಷೆ ಅಪರ್ಣಾ ರಂಗ ಮಾತನಾಡಿ, ಮೈಸೂರು ಮೃಗಾಲಯಕ್ಕೆ ಲಕ್ಷಾಂತರ ಮಂದಿ ಪ್ರವಾಸಿಗರು ಒಂದು ವರ್ಷದಲ್ಲಿ ಬರುತ್ತಾರೆ. ಅವರಿಗೆ ಇಲ್ಲಿ ಈ ಹಿಂದೆ ಮೂರು ಹಳೆಯ ಕೇಂದ್ರಗಳಿದ್ದು, ಅವುಗಳಲ್ಲಿ ಯಾವುದೇ ಒಳ್ಳೆಯ ಸೌಲಭ್ಯಗಳು ಇರಲಿಲ್ಲ. ಆದ್ದರಿಂದ ಒಂದು ಒಳ್ಳೆಯ ಚೈಲ್ಡ್ ಕೇರ್ ಸೆಂಟರ್ ತೆರೆಯಲಾಗಿದೆ ಎಂದು ಹೇಳಿದರು.
ಯದುವೀರ್ ಅವರು ಮಾತನಾಡಿ, ಮೈಸೂರಿಗೆ ಅರಮನೆಯನ್ನು ಬಿಟ್ಟರೆ ಅತಿ ಹೆಚ್ಚು ಪ್ರವಾಸಿಗರು ಬರುವ ಎರಡನೇ ಸ್ಥಳ ಮೃಗಾಲಯ. ಇಲ್ಲಿ ಪ್ರವಾಸಿಗರಿಗೆ ಎಲ್ಲಾ ಸೌಲಭ್ಯ ಒದಗಿಸುವುದು ಮುಖ್ಯವಾಗಿದೆ. ಇದರ ಜೊತೆಗೆ ಮೃಗಾಲಯದಲ್ಲಿ ಮಾಹಿತಿ ಕೇಂದ್ರ ಸ್ಥಾಪನೆ ಮಾಡಿದರೆ ದೇಶದ ಹಳೆಯ ಮೃಗಾಲಯ ಮೊದಲ ಸ್ಥಾನಕ್ಕೆ ತಲುಪಲಿದೆ ಎಂದರು.