ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.21: ರಾಜ್ಯದಲ್ಲಿ ವಿದ್ಯುತ್ನ ಕೃತಕ ಅಭಾವ ಸೃಷ್ಟಿಸಿ, ಹೊರರಾಜ್ಯಗಳಿಮದ ಖರೀದಿ ನೆಪದಲ್ಲಿ ಕಮಿಷನ್ಲ ಹೊಡೆಯಲು ಯೋಜಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ಪಕ್ಷದ ಕಚೇರಿಯಲ್ಲಿ ದಸರಾ ಪೂಜೆ ನಡೆಸಿದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚರಾಜ್ಯಗಳ ಚುನಾವಣೆ ಹಾಗೂ ಲೋಕಸಭೆ ಚುನಾವಣೆಯ ವೇಳೆ ದೊಡ್ಡ ಪ್ರಮಾಣದಲ್ಲಿ ಹಣ ಹಂಚುವ ಉದ್ದೇಶದಿಂದ ಖಾಸಗಿ ಕಂಪನಿಗಳಿಂದ ವಿದ್ಯುತ್ ಖರೀದಿ ಮಾಡಿ ಕಮೀಷನ್ ಸಂಗ್ರಹ ಮಾಡಲು ರಾಜ್ಯ ಸರಕಾರ ಹುನ್ನಾರ ನಡೆಸಿ. ಖಾಸಗಿ ಕಂಪನಿಗಳಿಂದ ಖರೀದಿ ಮಾಡಿದರೆ ತಾನೇ ಇವರ ಜೇಬು ತುಂಬುವುದು ಎಂದು ಅವರು ದೂರಿದರು.
ರಾಜ್ಯದಲ್ಲಿ ಮಳೆಯ ಅಭಾವದಿಂದ ಜಲ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದ್ದರೂ ಇತರೆ ಮೂಲಗಳಿಂದ ಸಾಕಷ್ಟು ವಿದ್ಯುತ್ ಉತ್ಪಾದನೆ ಮಾಡಬಹುದು. ಅಧಿಕಾರ ಬಂದಾಗಿನಿಂದಲೇ ಸರಕಾರ ಮುನ್ನೆಚ್ಚರಿಕೆ ವಹಿಸಿದ್ದಿದ್ದರೆ ಅಗತ್ಯವಾದಷ್ಟು ಕಲ್ಲಿದ್ದಲನ್ನು ದಾಸ್ತಾನು ಮಾಡಿಕೊಳ್ಳಬಹುದಿತ್ತು. ಖರೀದಿ ವ್ಯವಹಾರ ನಡೆಸಿ ಕಮೀಷನ್ ಹೊಡೆಯುವ ದುರುದ್ದೇಶದಿಂದ ವಿದ್ಯುತ್ ಉತ್ಪಾದನೆಯನ್ನು ಉಪೇಕ್ಷೆ ಮಾಡಲಾಗಿದೆ ಎಂದು ದೂರಿದರು.
ಈ ಸರಕಾರಕ್ಕೆ ಹಣ ಮಾಡುವುದು ಒಂದೇ ಉದ್ದೇಶ ಇದೆ. ಹೈಕಮಾಂಡ್ ಮುಂದೆ ವಸೂಲಿ ಮಾಡುತ್ತೇವೆ ಎಂದು ನುಡಿದಿದ್ದರು. ಅದರಂತೆ ಈಗ ಕಲೆಕ್ಷನ್ ಮಾಡುತ್ತಿದ್ದಾರೆ. ನುಡಿದಂತೆ ನಡೆಯುತ್ತಿದ್ದಾರೆ. ಸಮರ್ಥವಾಗಿ ದುಡ್ಡು ಹೊಡೆಯುವ ಕಾರ್ಯಕ್ರಮಗಳನ್ನಷ್ಟೇ ಕಾಂಗ್ರೆಸ್ಸಿನವರು ಹಾಕಿಕೊಳ್ಳುತ್ತಿದ್ದಾರೆ. ಅದೇ ಮುತುವರ್ಜಿಯನ್ನು ಜನರ ಬಗ್ಗೆ ತೂರಿಸಿದ್ದಿದ್ದರೆ ಬೇಕಾದಷ್ಟು ವಿದ್ಯುತ್ ಉತ್ಪಾದನೆ ಮಾಡಿಕೊಳ್ಳಬಹುದಿತ್ತು ಎಂದು ಕುಮಾರಸ್ವಾಮಿ ಅವರು ಹೇಳಿದರು.
ಸದ್ಯದ ಪರಿಸ್ಥಿತಿಯಲ್ಲಿ 16867.63 ಮೆಗಾವ್ಯಾಟ್ ವಿದ್ಯುತ್ ಅನ್ನು ಇವತ್ತೂ ಉತ್ಪಾದನೆ ಮಾಡಬಹುದು. ಜಲಾಶಯಗಳಲ್ಲಿ ನಿರೀಕ್ಷಿತ ನೀರು ಸಂಗ್ರಹ ಇಲ್ಲದಿರುವುದರಿಂದ ಮೊದಲಿಗಿಂತ ಅರ್ಧದಷ್ಟು ಜಲ ವಿದ್ಯುತ್ತನ್ನೇ ಮಾಡಲಿ. ಆದರೆ, ಇವರು ಉತ್ಪಾದನೆ ಮಾಡುತ್ತಿಲ್ಲ, ಮಾಡುವುದೂ ಇಲ್ಲ. ಇಂತಹ ಬರಗಾಲದ ನಡುವೆಯೂ ಉತ್ಪಾದನೆ ಮಾಡಲು ಸಮಸ್ಯೆ ಇಲ್ಲ. ಗ್ಯಾರಂಟಿಗಳ ಜಪ ಮಾಡಿಕೊಂಡು ವಿದ್ಯುತ್ ಉತ್ಪಾದನೆ ನಿರ್ಲಕ್ಷ್ಯ ಮಾಡಿದರು. ಗೃಹಜ್ಯೋತಿ ಕೊಡುತ್ತಿದ್ದೇವೆ, ಕೊನೆಪಕ್ಷ ಆಗಲಾದರೂ ಅವರು ಉತ್ಪಾದನೆಯತ್ತ ಗಮನ ಕೊಡಬೇಕಿತ್ತು. ಕಮೀಷನ್ ದುರಾಸೆಯಿಂದ ಅದನ್ನೂ ಮಾಡಲಿಲ್ಲ ಎಂದು ಎಂದು ಮಾಜಿ ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಮಾತಿಗೆ ಮುಂಚೆ ಕಮೀಷನ್, ಪರ್ಸಂಟೇಜ್, ವರ್ಗಾವಣೆ ಧಂದೆ ಮಾಡಿಕೊಂಡು ಕೂತಿದ್ದಾರೆ. ಇನ್ನೊಂದು ತಿಂಗಳು ಕಳೆದರೆ ರಾಜ್ಯದ ರೈತರ ಪರಿಸ್ಥಿತಿ ಮತ್ತೂ ಬಿಗಡಾಯಿಸುತ್ತದೆ. ಸಾಲ ಕೊಟ್ಟವರು ಮನೆ ಹತ್ತಿರ ಬರುತ್ತಾರೆ. ವಿದ್ಯುತ್ ಕ್ಷಾಮ ಮತ್ತಷ್ಟು ತೀವ್ರವಾಗಲಿದೆ. ಇವರು ನೋಡಿದರೆ ವರುಷದ ಕೂಳಿಗೆ ಎಳ್ಳೂನೀರು ಬಿಟ್ಟು ಹರುಷದ ಕೂಳಿನ ಗ್ಯಾರಂಟಿ ಮಾದರಿಯನ್ನು ಇಡೀ ದೇಶಕ್ಕೆ ಬೃಹದೀಕರಿಸಿ ವಿಸ್ತರಣೆ ಮಾಡುತ್ತಿದ್ದಾರೆ. ಮುಂದೆ ಎಲ್ಲಾ ರಾಜ್ಯಗಳಲ್ಲಿಯೂ ಇದೇ ದುಃಸ್ಥಿತಿಯನ್ನು ಸೃಷ್ಟಿ ಮಾಡುವುದು ಕಾಂಗ್ರೆಸ್ ಹುನ್ನಾರವಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂಧನ ಇಲಾಖೆಗೆ ಸಂಬಂಧಿಸಿದ ಸಭೆ ನಡೆಸಿದರು. ರಾಜ್ಯದಲ್ಲಿ 15000 ಮೆಗಾವ್ಯಾಟ್ ಕೊರತೆ ಇದೆ, ಖರೀದಿ ಮಾಡ್ತೀವಿ ಎಂದು ಹೇಳಿದ್ದಾರೆ. ಐದು ತಿಂಗಳಿಂದ ಸುಮ್ಮನೆ ಇದ್ದವರು ಈಗ ಹಿಂದಿನ ಸರಕಾರದ ಪಾಪದ ಫಲ ಎಂದು ಹೇಳುತ್ತಿದ್ದಾರೆ. ಅವರದ್ದೇನೋ ಪಾಪದ ಫಲ, ನೀವು ಪುಣ್ಯ ಮಾಡಿದ್ದೀರಲ್ಲ.. ನಿಮ್ಮ ಪುಣ್ಯದ ಫಲವನ್ನು ಜನತೆಗೆ ಕೊಡಬೇಕಲ್ಲಾ? ಎಂದು ಮಾಜಿ ಮುಖ್ಯಮಂತ್ರಿಗಳು ಟಾಂಗ್ ನೀಡಿದರು.
ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್, ವಿಧಾನ ಪರಿಷತ್ ಸದಸ್ಯ, ಮಾಜಿ ಶಾಸಕರಾದ ಸುರೇಶ್ ಗೌಡ, ಚೌಡರೆಡ್ಡಿ ತೂಪಲ್ಲಿ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ಹಿರಿಯ ಮುಖಂಡ ರಾಜಣ್ಣ ಮುತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪಾಕಿಸ್ತಾನ ಬೆಂಬಲಿಸಲು ಹೋಗಿದ್ದರೇ?
ಭಾರತದ ಕ್ರಿಕೆಟ್ ಪಂದ್ಯಾವಳಿ ಇದ್ದಾಗ ಬೆಂಬಲಿಸಲು ಹೋಗುವುದು ಸಹಜ. ಆದರೆ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಸದಸ್ಯರು ಶುಕ್ರವಾರ ಪಾಕಿಸ್ತಾನ- ಆಸ್ಟ್ರೇಲಿಯ ಪಂದ್ಯಾವಳಿ ವೀಕ್ಷಿಸಲು ಹೋಗಿದ್ದರು. ಇವರೇನು ಪಾಕಿಸ್ತಾನ ಬೆಂಬಲಿಸಲು ಹೋಗಿದ್ದರೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಇಡೀ ರಾಜ್ಯವೇ ಕತ್ತಲೆಯಲ್ಲಿ ಇದ್ದರೆ ಸಿಎಂ, ಡಿಸಿಎಂ ಸಚಿವರು, ಅಧಿಕಾರಿಗಳ ಪಟಾಲಂ ಕಟ್ಟಿಕೊಂಡು ಎಳೆಂಟು ಗಂಟೆ ಕ್ರಿಕೆಟ್ ಪಂದ್ಯ ನೋಡಲು ಹೋಗಿದ್ದಾರೆ. ಅಲ್ಲಿ ಇವರೆಲ್ಲ ಮಜಾ ಮಾಡಿಕೊಂಡು ಕೂತಿದ್ದರು. ಇಂಥ ದುರಿತ ಕಾಲದಲ್ಲಿಯೂ ಇವರಿಗೆ ಎಂಜಾಯ್ ಮಾಡುವ ಮನಃಸ್ಥಿತಿ ಇದೆ. ಅದಕ್ಕೆ ಏನೆಂದು ಹೇಳುವುದು ಎಂದು ಅವರು ಖಾರವಾಗಿ ಉತ್ತರಿಸಿದರು.