ಸುದ್ದಿಮೂಲ ವಾರ್ತೆ
ಗುಂಡ್ಲುಪೇಟೆ, ಏ.9: ಜೀವ ವೈವಿಧ್ಯತೆಯ ತಾಣ ಬಂಡೀಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸಪಾರಿ ನಡೆಸಿದರು. ಹುಲಿ ಯೋಜನೆಯ ಸುವರ್ಣ ಮಹೋತ್ಸವದ ಆಚರಣೆಗಾಗಿ ಬಂಡೀಪುರಕ್ಕೆ ಬಂದಿರುವ ಪ್ರಧಾನಿ ಮೋದಿ ಅವರು ಬಂಡೀಪುರ ಹುಲಿಸಂರಕ್ಷಿತ ಪ್ರದೇಶದಲ್ಲಿ ಸುಮಾರು 22 ಕಿ.ಮೀ. ಓಡಾಡಿದರು.
ಶನಿವಾರ ರಾತ್ರಿ ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದ ಪ್ರಧಾನಿ ಮೋದಿ ಅವರು ಭಾನುವಾರ ಬೆಳಗ್ಗೆ 7.35ರ ಸುಮಾರಿಗೆ ಬಂಡೀಪುರ ಕ್ಯಾಂಪಸ್ಗೆ ತಲುಪಿದರು. ಬಳಿಕ ಅಲ್ಲಿ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಗೌರವ ಸಲ್ಲಿಸಿದರು.
ಇದಕ್ಕೂ ಮುನ್ನ ಇಂದು ಬೆಳಗ್ಗೆ ಪ್ರಧಾನಿ ಮೋದಿಯವರು ಬಂಡೀಪುರದಲ್ಲಿ ಹುಲಿ ಸಂರಕ್ಷಣೆ ಯೋಜನೆಯ ಸುವರ್ಣ ವರ್ಷಾಚರಣೆ ಅಂಗವಾಗಿ ಅಂಚೆಚೀಟಿ ಬಿಡುಗಡೆ ಮಾಡಿದರು. ಈ ವೇಳೆ ಇಲ್ಲಿನ ಸಂರಕ್ಷಣೆಯ ಪ್ರಯತ್ನದಲ್ಲಿ ತೊಡಗಿರುವ ಮುಂಚೂಣಿ ಕ್ಷೇತ್ರ ಸಿಬ್ಬಂದಿ ಮತ್ತು ಸ್ವಸಹಾಯ ಗುಂಪುಗಳೊಂದಿಗೆ ಸಂವಾದ ನಡೆಸಿದರು.
7.50ಕ್ಕೆ ತೆರೆದ ಜೀಪ್ನಲ್ಲಿ (ಬೊಲೆರೊ ಕ್ಯಾಂಪರ್) ಸಫಾರಿಗೆ ತೆರಳಿದ ಅವರು ಎರಡು ಗಂಟೆಗಳ ಕಾಲ ಬಂಡೀಪುರ ಅರಣ್ಯದಲ್ಲಿ ಸಂಚರಿಸಿ, ಸೌಂದರ್ಯ ಸವಿದರು. ಸಫಾರಿ ಡ್ರೆಸ್ಕೋಡ್ನಲ್ಲಿ ಮಿಂಚುತ್ತಿದ್ದ ಪ್ರಧಾನಿ, ತಮ್ಮ ಕ್ಯಾಮರಾ ಮೂಲಕ ಚಿತ್ರಗಳನ್ನು ಸೆರೆಹಿಡಿದರು. ಲೆನ್ಸ್ ಮೂಲಕ ದೂರದ ಪ್ರದೇಶಗಳನ್ನು ಸೂಕ್ಷ್ಮವಾಗಿ ವೀಕ್ಷಿಸಿದರು.
ಪ್ರಧಾನಿ ಮೋದಿ ಅವರೊಂದಿಗೆ ದೆಹಲಿಯಿಂದ ಬಂದಿದ್ದ ಏಮ್ಸ್ ವೈದ್ಯರ ತಂಡ, ಎಡಿಜಿಪಿ ಅಲೋಕ್ ಕುಮಾರ್, ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಎಸ್ ಪಿ ಪದ್ಮನಿ ಸಾಹು ಸೇರಿದಂತೆ ಜಿಲ್ಲೆಯ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಇಲಾಖೆಯ ವೈದ್ಯರ ತಂಡ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
ಎರಡು ಗಂಟೆಗಳ ಅವಧಿಯಲ್ಲಿ ಮೋದಿ ಅವರು, ಅರಣ್ಯದ ಕಚ್ಚಾ ರಸ್ತೆಯಲ್ಲಿ 22 ಕಿ.ಮೀ ಸಂಚರಿಸಿ ಬಂಡೀಪುರದ ಅರಣ್ಯ, ಪ್ರಾಣಿ ಪಕ್ಷಿಗಳನ್ನು ವೀಕ್ಷಿಸಿದರು.
ಕಾಣದ ಹುಲಿಗಳು:
ಪ್ರಧಾನಿ ಮೋದಿ ಅವರು ಬಂಡೀಪುರ ಹುಲಿಸಂರಕ್ಷಿತ ಪ್ರದೇಶದಲ್ಲಿ ಸುಮಾರು 22 ಕಿ.ಮೀ. ಓಡಾಡಿದರೂ ಸಹ ಅವರಿಗೆ ಒಂದೂ ಹುಲಿ ಕಾಣಿಸಲಿಲ್ಲ ಎನ್ನಲಾಗಿದೆ.
‘ಆನೆಗಳು, ಜಿಂಕೆಗಳು, ಕಾಟಿಗಳು ಸೇರಿದಂತೆ ಹಲವು ಪ್ರಾಣಿ, ಪಕ್ಷಿಗಳು ಸಫಾರಿ ಸಮಯದಲ್ಲಿ ಎದುರಾದವು. ನಮಗೆ ಹುಲಿ ಕಾಣಿಸಲಿಲ್ಲ’ ಎಂದು ಅಧಿಕಾರಿ ಮಾಹಿತಿ ನೀಡಿದರು.
ರಾಜ್ಯದಲ್ಲಿ ವಿಧಾನಸಭಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಸ್ಥಳೀಯ ಜನಪ್ರತಿನಿಧಿಗಳು ಸಫಾರಿಯಲ್ಲಿ ಭಾಗವಹಿಸಿರಲಿಲ್ಲ. ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಬಂಡೀಪುರ ಮಾರ್ಗವಾಗಿ ಕೇರಳಕ್ಕೆ ತೆರಳುವ ವಾಹನ ಸಂಚಾರ ಸ್ಥಗಿತ ಮಾಡಲಾಗಿತ್ತು.
ಬಾಕ್ಸ್,,,,
ಮಾರಿಬಿಡುತ್ತಾರೆ ಎಂಬ ಭಯ
ಪ್ರಧಾನಿ ಮೋದಿ ಅವರ ಸಫಾರಿ ವೇಳೆ ಹುಲಿ ಕಾಣಸಿಗಲಿಲ್ಲ ಎಂಬುದು ಚರ್ಚೆಗೆ ಕಾರಣವಾಗಿದೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಹಿತ ಹಲವರು ಇದನ್ನು ವ್ಯಂಗ್ಯ ಮಾಡಿದ್ದಾರೆ.
ಹುಲಿಯನ್ನು ಹಿಡಿದು ಮಾರಿಬಿಡುತ್ತಾರೆ ಎನ್ನುವ ಭಯಕ್ಕೆ, ಅವುಗಳು ಯಾವ ಗುಹೆಯೊಳಗೆ ಅಡಗಿ ಕುಳಿತಿವೆಯೋ.. ಅಯ್ಯೋ ಪಾಪ.! ಎಂದು ಸಿದ್ದರಾಮಯ್ಯ ವ್ಯಂಗ್ಯವಾಗಿ ಹೇಳಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ‘ಬಂಡಿಪುರ ಉಳಿಸಿ’ ಎಂಬ ಅಭಿಯಾನವನ್ನು ಕನ್ನಡಿಗರು ಶುರು ಮಾಡುವಂತೆ ಆಗದಿರಲಿ. ಅದೇ ನೀವು ಕರುನಾಡಿಗೆ ಮಾಡುವ ದೊಡ್ಡ ಉಪಕಾರ ನರೇಂದ್ರ ಮೋದಿ ಜೀ ಎಂದು ಟ್ವೀಟ್ ಮೂಲಕ ಕುಟುಕಿದ್ದಾರೆ.
ಆಸ್ಕರ್ ವಿಜೇತರನ್ನು ಅಭಿನಂದಿಸಿದ ಮೋದಿ
ಮಧುಮಲೈ: ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತಾರಣ್ಯಕ್ಕೆ ಭಾನುವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ತೆಪ್ಪಕಾಡು ಆನೆ ಶಿಬಿರದ ಆನೆಗಳಿಗೆ ಆಹಾರ ತಿನ್ನಿಸಿದರು.
ಆಸ್ಕರ್ ಪ್ರಶಸ್ತಿ ವಿಜೇತ ದಿ ಎಲಿಪೆಂಟ್ ವಿಸ್ಪರ್ಸ್ ಸಾಕ್ಷ್ಯ ಚಿತ್ರದ ಪ್ರಮುಖ ಪಾತ್ರಗಳಾದ ಬೊಮ್ಮನ್ ಮತ್ತು ಬೆಳ್ಳಿ ದಂಪತಿಯನ್ನು ಅಭಿನಂದಿಸಿದರು. ಈ ವೇಳೆ ಬೊಮ್ಮನ್ ದಂಪತಿ ಅವರೊಂದಿಗೆ ಕೆಲ ಕಾಲ ಸಂವಾದ ನಡೆಸಿದರು. ಚಿತ್ರದಲ್ಲಿ ಇದ್ದಂತಹ ಆನೆಗೆ ಕಬ್ಬು ತಿನ್ನಿಸಿದರು.