ಸುದ್ದಿಮೂಲ ವಾರ್ತೆ
ಕೆ.ಆರ್.ಪುರ.ಸೆ.29:ರೈತ ಮುಖಂಡರ ಕಾರ್ ಗಳಿಗೆ ನಿಯಮಬಾಹಿರವಾಗಿ ಅಳವಡಿಸಿದ್ದ ಸಂಘಟನೆ ಹೆಸರು ಇರುವ ದೋಷಪೂರಿತ ನಾಮ ಫಲಕ ಹಾಗೂ ಹಸಿರು ಟಾಪ್ ಲೈಟ್ ಅನ್ನು ವೈಟ್ ಫಿಲ್ಢ್ ವಿಭಾಗದ ಪೋಲಿಸರು ತೆರವು ಮಾಡುವ ಮೂಲಕ ರೈತ ಮುಖಂಡರಿಗೆ ಬಿಸಿ ಮುಟ್ಟಿಸಿದ ಪ್ರಸಂಗ ನಡೆಯಿತು.
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕಾವೇರಿ ಹೋರಾಟಕ್ಕೆ ರತ್ನ ಭಾರತ ರೈತ ಸಮಾಜದ ರಾಜ್ಯಾಧ್ಯಕ್ಷ ಲಕ್ಷ್ಮಣ್ ನೇತೃತ್ವದಲ್ಲಿ ಏಳೆಂಟು ಕಾರ್ ಗಳಲ್ಲಿ ಆಗಮಿಸಿದ್ದರು. ತಮ್ಮ ವಾಹನಗಳ ಮೇಲೆ ಹಸಿರು ಟಾಪ್ ಲೈಟ್ ಹಾಗೂ ಸಂಘಟನೆಯ ಹೆಸರು ಬರೆಯಲಾಗಿತ್ತು. ಇದನ್ನು ಗಮನಿಸಿದ ವೈಟ್ ಫೀಲ್ಡ್ ವಿಭಾಗದ ಎಸಿಪಿ ಮಹಮ್ಮದ್ ಬಾಬು ಅವರು ನಿಯಮಬಾಹಿರವಾಗಿ ರಸ್ತೆಯಲ್ಲಿ ಓಡಾಡುತ್ತಿದ್ದ ರೈತ ಮುಖಂಡರ ವಾಹನಗಳನ್ನು ತಡೆದು ನೊಂದಣಿ ನಾಮ ಫಲಕ ಮತ್ತು ಟಾಪ್ ಲೈಟ್ ಗಳನ್ನು ತೆಗೆಯುವಂತೆ ಸಲಹೆ ನೀಡಿದರು.
ಆದರೆ ನಾಮ ಫಲಕ ಹಾಗೂ ಟಾಪ್ ಲೈಟ್ ತೆಗೆಯಲು ಒಪ್ಪದಿದ್ದಾಗ ಪೋಲಿಸರೆ ತೆರವುಗೊಳಿಸಿ ಕೆ.ಆರ್.ಪುರ ಸಂಚಾರ ಠಾಣೆಗೆ ವಾಹನಗಳನ್ನು ಕಳುಹಿಸಿ ವಾಹನಗಳ ಮೇಲೆ ಕ್ರಮ ಜರುಗಿಸುವಂತೆ ಎಸಿಪಿ ಮಹಮ್ಮದ್ ಬಾಬು ಸೂಚನೆ ನೀಡಿದರು.