ಸುದ್ದಿಮೂಲ ವಾರ್ತೆ
ಹೊಸಕೋಟೆ, ಮೇ 17: ತಾಲೂಕಿನಲ್ಲಿ ಅನ್ಯಾಯವನ್ನು ಖಂಡಿಸಿ ದಲಿತರಿಗೆ ನ್ಯಾಯಕೊಡಿಸುವಲ್ಲಿ ಪೋಲಿಸ್ ಇಲಾಖೆ ವಿಪಲವಾಗಿರುವುದು ಎದ್ದು ಕಾಣುತ್ತಿದೆ ಎಂದು ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷ ಡಾ.ಕೆ. ಶಿವರಾಮ್ ತಿಳಿಸಿದ್ದಾರೆ.
ತಾಲೂಕಿನ ನಗರೇನಹಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿದ್ದ ನಿವಾಸಕ್ಕೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿ ಆರ್ಥಿಕ ನೆರವನ್ನು ನೀಡಿ ಮಾತನಾಡಿದರು.
ನಗರೇನಹಳ್ಳಿಯಲ್ಲಿ ಇದೇ 13ನೇ ತಾರೀಖು ಮೇಲ್ಜಾತಿಗೆ ಸೇರಿದ ಕಾಂಗ್ರೆಸ್ ಕಾರ್ಯಕರ್ತರು ದಲಿತರ ಮನೆ ಮುಂಭಾಗದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸುವ ವೇಳೆ ಮನೆಯಲ್ಲಿ ಪುಟ್ಟ ಮಗು ಇದೆ ಎಂದು ಮನವಿ ಮಾಡಿದ್ದಕ್ಕೆ ಹಲ್ಲೆ ನಡೆಸಲಾಗಿದೆ. ಈ ಸಂಬಂಧ ಸೂಲಿಬೆಲೆ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಆರೋಪಿಗಳನ್ನು ಇದುವರೆಗೆ ಬಂಧಿಸದಿರುವುದು ಪೋಲಿಸ್ ಇಲಾಖೆಯ ವೈಪಲ್ಯ ಎದ್ದು ಕಾಣುತ್ತಿದೆ. ಸ್ವಾತಂತ್ರ್ಯ ಬಂದು 76 ವರ್ಷಕಳೆದರೂ ಅಲ್ಲಲ್ಲಿ ಅಸ್ಪೃಶ್ಯತೆ ಜೀವಂತವಾಗಿರುವುದು ಖೇದದ ಸಂಗತಿಯಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಸಿದ್ದೇಶ್ ಮಾತನಾಡಿ, ಘಟನೆ ನಡೆದ ಮರುದಿನವೇ ಹಲ್ಲೆಗೊಳಗಾದವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದು ಪೋಲೀಸ್ ಇಲಾಖೆಗೂ ಮಾಹಿತಿ ನೀಡಿ ಒತ್ತಾಯಿಸಿದ್ದು ನಮ್ಮ ಇಲಾಖೆಯಿಂದ ಇಪ್ಪತ್ತು ಸಾವಿರ ರೂಪಾಯಿ ನೆರವನ್ನು ನೀಡಲಾಗುವುದು ಎಂದರು.
ಈ ಸಂಧರ್ಭದಲ್ಲಿ ಹೋರಾಟಗಾರರಾದ ಕೊರಳೂರು ಶ್ರೀನಿವಾಸ್, ಚಿನ್ನಸ್ವಾಮಿ, ಆಲಗೊಂಡನಹಳ್ಳಿ ಮುನಿಸ್ವಾಮಿ ಅಶ್ವಥ್, ಬಿಸನಹಳ್ಳಿ ಮೂರ್ತಿ ರಮೇಶ್, ಚಂದ್ರು ನಾರಾಯಣಸ್ವಾಮಿ ಸುಬ್ಬು ಸೇರಿದಂತೆ ಇತರರು ಇದ್ದರು.