ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.10 : ಈ ವರ್ಷ ಜನವರಿಯಿಂದ ಸೆಪ್ಟಂಬರ್ ವರೆಗೆ ಐಟಿ ಹಬ್ ಬೆಂಗಳೂರಿನಲ್ಲಿ ಒಟ್ಟು 12,615 ಸೈಬರ್ ಅಪರಾಧಗಳು ಪ್ರಕರಣಗಳು ದಾಖಲಾಗಿದ್ದು, 27 ಕೋಟಿ ರೂ. ಮಾಲೀಕರಿಗೆ ಹಿಂದಿರುಗಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸೈಬರ್ ಅಪರಾಧದ ಒಟ್ಟು 12,615 ಪ್ರಕರಣಗಳಿಗೆ ಸಂಬಂಧಿಸಿದಂತೆ ಇಲಾಖೆ ತ್ವರಿತ ಕ್ರಮಗಳನ್ನು ತೆಗೆದುಕೊಂಡಿದೆ.
ತನಿಖಾಧಿಕಾರಿಗಳು ವಿವಿಧ ಬ್ಯಾಂಕ್ ಖಾತೆಗಳಿಂದ ಒಟ್ಟು ಬರೊಬ್ಬರಿ 201,83,28,534 ರೂ. ಹಣವನ್ನು ಫ್ರೀಜ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 27,68,72,273 ಮೊತ್ತದ ಹಣವನ್ನು ಸಂಬಂಧಪಟ್ಟ ಮಾಲೀಕರಿಗೆ ಹಿಂತಿರುಗಿಸಲಾಗಿದೆ. ನ್ಯಾಯ ದೊರಕಿಸುವಲ್ಲಿ ಹಾಗೂ ಸೈಬರ್ ಅಪರಾಧಗಳ ತಡೆಗಾಗಿ ನಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಕಾರ್ಯವನ್ನು ಅವರು ಶ್ಲಾಘಿಸಿದ್ದಾರೆ.
ಕಳ್ಳತನಕ್ಕೆ ಸಂಬಂಧಪಟ್ಟ ಇನ್ನೊಂದು ಪ್ರಕರಣದಲ್ಲಿ ಬೆಂಗಳೂರು ನಗರ ಪೊಲೀಸರು ರಾಜಸ್ಥಾನದಲ್ಲಿ 4 ಜನರ ಗುಂಪನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ. ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆದಿನಾಥ್ ಜೈನ ಮಂದಿರದಿಂದ ಕಳ್ಳತನವಾಗಿದ್ದ ಸುಮಾರು 9.75 ಲಕ್ಷ ಮೌಲ್ಯದ 14 ಕೆಜಿ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು. ನಗರದ ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿ ಬಸ್ ನಿಲ್ದಾಣದ ಹಲವು ವಸ್ತುಗಳು ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯುಕ್ತರು, ಅದು ಕಳ್ಳತನವಾಗಿಲ್ಲ, ಬದಲಿಗೆ ಸಾರ್ವಜನಿಕರ ಸುರಕ್ಷತೆಗಾಗಿ ಬಿಬಿಎಂಪಿ ಮೂಲಕ ತೆಗೆದು ಹಾಕಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.