ಸುದ್ದಿಮೂಲ ವಾರ್ತೆ
ಕೆ.ಆರ್.ಪುರ,ನ.04: ಬಿಬಿಎಂಪಿ ಹೊರಮಾವು ಉಪವಿಭಾಗದ ವ್ಯಾಪ್ತಿಯ ಕೆ.ಚನ್ನಸಂದ್ರದಲ್ಲಿ ರಸ್ತೆ ಗುಂಡಿಗಳಿಗೆ ಹಾಕಿದ ಡಾಂಬರ್ ಕೆಲವೇ ಗಂಟೆಗಳಲ್ಲಿ ಕಿತ್ತು ಬರುತ್ತಿರುವುದನ್ನು ಕಂಡು ಕಳಪೆ ಕಾಮಗಾರಿ ನಡೆಸುತ್ತಿರುವ ಬಿಬಿಎಂಪಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಕೆ.ಆರ್.ಪುರ ಕ್ಷೇತ್ರದ ರಾಮಮೂರ್ತಿನಗರ ವಾರ್ಡಿನ ಕೆ.ಚನ್ನಸಂದ್ರದ ಎಲ್.ಎಲ್.ಎಸ್.ಗುರುಕುಲ ಶಾಲೆ ಸಮೀಪದ ಮುಖ್ಯರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಬಿಬಿಎಂಪಿ ಮುಂದಾಗಿದೆ. ಬಿಬಿಎಂಪಿ ಬಿದ್ದಿರುವ ರಸ್ತೆ ಗುಂಡಿಗಳಿಗೆ ಡಾಂಬರ್ ಹಾಕಲಾಗುತ್ತಿದೆ. ಬಿಬಿಎಂಪಿ ಹಾಕಿರುವ ಡಾಂಬರನ್ನು ಸಾರ್ವಜನಿಕರು ಪರಿಶೀಲಿಸಿದಾಗ ದೊಸೆಯಂತೆ ಕಿತ್ತು ಬಂದಿದೆ. ಕೆಲವೇ ಗಂಟೆಗಳಲ್ಲಿ ಕಿತ್ತು ಬರುತ್ತಿರುವುದನ್ನು ಕಂಡು ಕೂಡಲೇ ಕಳಪೆ ಗುಣಮಟ್ಟದ ಕಾಮಗಾರಿ ನಿಲ್ಲಿಸುವಂತೆ ಆಗ್ರಹಿಸಿದರು.
ಶನಿವಾರ ಬೆಳಿಗ್ಗೆ 8.30 ರ ಸಮಯದಲ್ಲಿ ಬಿಬಿಎಂಪಿ ಡಾಂಬರು ಹಾಕುವ ಕೆಲಸಕ್ಕೆ ಮುಂದಾಗಿತ್ತು. ಸಾರ್ವಜನಿಕರೊಂದಿಗೆ ತೆರಳಿ ಹಾಕಿರುವ ಡಾಂಬರು ಪರಿಶೀಲಿಸಿದಾಗ ಡಾಂಬರು ಹಾಕಿ ಅರ್ಧ ಗಂಟೆಯೊಳಗೆ ಪೇಪರ್ ನಂತೆ ಕಿತ್ತು ಬಂದಿದೆ. ಬಿಬಿಎಂಪಿ ತೋರಿಕೆಗಾಗಿ ಡಾಂಬರು ಕಳಪೆ ಕಾಮಗಾರಿ ನಡೆಸುತ್ತಿದೆ. ಕಳಪೆ ಕಾಮಗಾರಿ ನಡೆಯುತ್ತಿದ್ದರೂ ಪಾಲಿಕೆ ಅಧಿಕಾರಿಗಳು ಸ್ಥಳದಲ್ಲಿದ್ದರೂ ಜಾಣಕುರುಡತನ ಪ್ರದರ್ಶಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು.
ರಾಮಮೂರ್ತಿನಗರ ವಾರ್ಡ್ ವ್ಯಾಪ್ತಿಗೆ ಬರುವ ಕೆ.ಚನ್ನಸಂದ್ರದಲ್ಲಿ ರಾಂಪುರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಾಗಿರುವ ಇಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಈ ರಸ್ತೆಯ ಮೂಲಕ ತೆರಳುತ್ತವೆ. ರಸ್ತೆ ಗುಂಡಿಗಳು ಬಿದ್ದಿರುವ ಕುರಿತು ಬಿಬಿಎಂಪಿ ಗಮನಕ್ಕೆ ತರಲಾಗಿತ್ತು. ರಸ್ತೆ ಗುಂಡಿಗಳಿಂದಾಗಿ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿತ್ತು. ಬಿಬಿಎಂಪಿ ರಸ್ತೆ ಗುಂಡಿ ಮುಚ್ಚುವ ಅವಸರದಲ್ಲಿ ಕಳಪೆ ಕಾಮಗಾರಿ ನಡೆಸಿದೆ ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನ ಹರಿಸಬೇಕಾಗಿದೆ ಎಂದು ಸ್ಥಳೀಯ ದಿಲೀಪ್ದೂರಿದರು.