ಆನೇಕಲ್, ಆ. 15 : ಕೊಡತಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆಗೆ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು ಚುನಾವಣಾ ಪ್ರಕ್ರಿಯೆಯನ್ನ ಮುಂದೂಡಲಾಗಿದೆ.
ಆ.14 ಸೋಮವಾರದಂದು ಕೊಡತಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆಯ ದಿನಾಂಕ ನಿಗದಿ ಮಾಡಲಾಗಿತ್ತು. ಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ ಚುನಾವಣೆಯನ್ನು ನಡೆಸಲಾಗುತ್ತಿತ್ತು. ಆದರೆ ಚುನಾವಣಾ ಅಧಿಕಾರಿಗಳು ಚುನಾವಣಾ ಫಲಿತಾಂಶ ಘೋಷಣೆ ಮಾಡುವ ಸಮಯಕ್ಕೆ ಹೈಕೊರ್ಟ್ ತಡೆಯಾಜ್ಞೆ ನೀಡಿರುವ ಬಗ್ಗೆ ವಕೀಲರು ಮಾಹಿತಿಯನ್ನು ನೀಡಿದ್ದಾರೆ. ಹೀಗಾಗಿ ಚುನಾವಣಾ ಅಧಿಕಾರಿಗಳು ಚುನಾವಣೆ ಮುಂದೂಡಿಕೆ ಮಾಡಿದ್ದಾರೆ.
ಚುನಾವಣೆಗೆ ಮುನ್ನವೇ ಕೊಡತಿ ಗ್ರಾಮ ಪಂಚಾಯಿತಿ ಸದಸ್ಯರಾದ ಅಂಟೋನಿ ಮೆರಿಯಮ್ಮ ಎಂಬುವವರು ನಾಪತ್ತೆಯಾಗಿದ್ದಾರೆ. ಅವರು ಸಿಗುವವರೆಗೂ ಚುನಾವಣೆಯನ್ನು ಮುಂದೂಡಬೇಕು ಎಂದು ಕೆಲ ಗ್ರಾಮ ಪಂಚಾಯಿತಿ ಸದಸ್ಯರು ಹೈಕೋರ್ಟ್ ಮೆಟ್ಟಲೇರಿದ್ದರು ಎನ್ನಲಾಗಿದೆ. ಹೀಗಾಗಿ ಇಂದು ಹೈಕೋರ್ಟ್ ಚುನಾವಣೆ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದೆ.
ಕೊಡತಿ ಪಂಚಾಯಿತಿಯಲ್ಲಿ ಒಟ್ಟು 28 ಸದಸ್ಯರು ಇದ್ದು, ಅದರಲ್ಲಿ 15 ಸದಸ್ಯರು ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದಾರೆ.