ಸುದ್ದಿಮೂಲ ವಾರ್ತೆ
ಬೆಂಗಳೂರು, ಸೆ.1: ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಸಂಸತ್ ಸ್ಥಾನದಿಂದ ಅನರ್ಹಗೊಳಿಸಿ ಹೈಕೋರ್ಟ್ ಶುಕ್ರವಾರ ಮಹತ್ವದ ಅದೇಶ ಹೊರಡಿಸಿದೆ. ಈ ಮೂಲಕ ಜೆಡಿಎಸ್ ಪಕ್ಷ ಹೊಂದಿದ್ದ ಏಕೈಕ ಸಂಸತ್ ಸದಸ್ಯ ಸ್ಥಾನವನ್ನು ಸಹ ಕಳೆದುಕೊಂಡಿದೆ.
2019ರ ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಆಸ್ತಿ ವಿವರದ ಬಗ್ಗೆ ತಪ್ಪು ಮಾಹಿತಿಗಳನ್ನು ನೀಡಿದ್ದಾರೆ ಎಂಬ ಆರೋಪದಡಿ ಪ್ರಜ್ವಲ್ ರೇವಣ್ಣ ಅವರ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ. ಪ್ರಜ್ವಲ್ ರೇವಣ್ಣ ಅವರಿಗೆ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ. ಆದರೆ, ಅವರು ಮುಂದಿನ 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇಲ್ಲ ಎಂಬುದರ ಬಗ್ಗೆ ನ್ಯಾಯಾಲಯ ಉಲ್ಲೇಖಿಸಿಲ್ಲ.
ಚುನಾವಣಾ ಅಕ್ರಮದಲ್ಲಿ ಭಾಗಿಯಾದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಅವರ ತಂದೆ ಹೊಳೆನರಸೀಪುರ ಶಾಸಕ ಎಚ್.ಡಿ. ರೇವಣ್ಣ ಮತ್ತು ಅವರ ಸಹೋದರ ಹಾಗೂ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಎ. ಮಂಜು ಅವರಿಗೆ ನೋಟಿಸ್ ಜಾರಿ ಮಾಡಲು ರಿಜಿಸ್ಟ್ರಿಗೆ ನ್ಯಾಯಾಲಯ ಆದೇಶಿಸಿದೆ.
2019ರ ಲೋಕಸಭಾ ಚುನಾವಣೆ ವೇಳೆ ಬಿಜೆಪಿಯಿಂದ ಸ್ಪರ್ಧಿಸಿ ಪರಾಜಿತರಾಗಿದ್ದ, ಹಾಲಿ ಅರಕಲಗೂಡು ಕ್ಷೇತ್ರದಿಂದ ಜೆಡಿಎಸ್ ಶಾಸಕರಾಗಿರುವ ಎ. ಮಂಜು ಹಾಗೂ ಜಿ. ದೇವರಾಜೇಗೌಡ ಅವರು ಸಲ್ಲಿಸಿದ್ದ ಚುನಾವಣಾ ಅರ್ಜಿಯನ್ನು ನ್ಯಾಯಮೂರ್ತಿ ಕೆ.ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ಭಾಗಶಃ ಪುರಸ್ಕರಿಸಿದೆ. ಪ್ರಜ್ವಲ್ ಅವರು ಚುನಾವಣಾ ಅಕ್ರಮದಲ್ಲಿ ಭಾಗಿಯಾಗಿರುವುದರಿಂದ ತನ್ನನ್ನು ವಿಜೇತ ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಎಂಬ ಎ. ಮಂಜು ಅವರ ಕೋರಿಕೆಯನ್ನೂ ನ್ಯಾಯಾಲಯವು ತಿರಸ್ಕರಿಸಿದೆ.
ಪ್ರಕರಣದ ಹಿನ್ನೆಲೆ:
ಕಳೆದ ಲೋಕಸಭೆ ಚುನಾವಣೆ ವೇಳೆ ಪ್ರಜ್ವಲ್ ಅವರು ನಾಮಪತ್ರ ಸಲ್ಲಿಸುವಾಗ ಪೂರ್ಣಪ್ರಮಾಣದಲ್ಲಿ ಆಸ್ತಿ ವಿವರ ಘೋಷಿಸಿಲ್ಲ ಎಂದು ಎ. ಮಂಜು ದೂರು ಸಲ್ಲಿಸಿದ್ದರು.
ಹೊಳೆನರಸೀಪುರದಲ್ಲಿರುವ ಚೆನ್ನಾಂಬಿಕಾ ಕನ್ವೆನ್ಷನ್ ಸೆಂಟರ್ ಸದ್ಯದ ಮಾರುಕಟ್ಟೆ ಮೌಲ್ಯ 5 ಕೋಟಿ ರೂ. ಇದೆ. ಆದರೆ ನಾಮಪತ್ರದಲ್ಲಿ ಅದರ ಒಟ್ಟು ಮೌಲ್ಯವನ್ನು 14 ಲಕ್ಷ ರೂಪಾಯಿ ಎಂದು ಸುಳ್ಳು ಲೆಕ್ಕ ನೀಡಲಾಗಿದೆ. ಇನ್ನೂ ಬೆಂಗಳೂರಿನ ಮಿನರ್ವ ವೃತ್ತದಲ್ಲಿರುವ ಕರ್ನಾಟಕ ಬ್ಯಾಂಕ್ನಲ್ಲಿ ತಮ್ಮ ಹೆಸರಿನಲ್ಲಿ ಪ್ರಜ್ವಲ್ ರೇವಣ್ಣ ಅವರು ಸುಮಾರು 48 ಲಕ್ಷ ರೂಪಾಯಿ ಹಣದ ಒಡೆಯನಾಗಿದ್ದಾರೆ. ಆದರೆ ಆ ವಿಚಾರದಲ್ಲಿಯೂ ಸುಳ್ಳು ಹೇಳಲಾಗಿದ್ದು, ಖಾತೆಯಲ್ಲಿ ಕೇವಲ 5 ಲಕ್ಷ ಇದೆ ಎಂದು ಹೇಳಿದ್ದಾರೆ ಎಂದು ಪರಾಜಿತ ಅಭ್ಯರ್ಥಿ ಎ.ಮಂಜು ಮತ್ತು ವಕೀಲ ದೇವರಾಜೇಗೌಡ ಅವರು ಆರೋಪಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ನಾನು ಜೆಡಿಎಸ್ ಸೇರಬೇಕಾದರೆ ದೇವೇಗೌಡರಿಗೆ ಹೇಳಿದ್ದೆ. ನಿಮ್ಮ ಮೊಮ್ಮಗನ ವಿರುದ್ಧವೇ ದೂರು ದಾಖಲಿಸಿದ್ದೇನೆ ಎಂದು. ಅದರ ಬಗ್ಗೆ ಚಿಂತೆ ಬಿಡಿ ಎಂದು ನನ್ನನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದರು. ಚುನಾವಣೆ ವೇಳೆ ಸುಳ್ಳು ಮಾಹಿತಿ ನೀಡುವವರಿಗೆ ಇದು ಎಚ್ಚರಿಕೆ. ಹೈಕೋರ್ಟ್ ಆದೇಶವನ್ನು ನಾನು ಗೌರವಿಸುತ್ತೇನೆ.
– ಎ.ಮಂಜು, ಶಾಸ
ಹೈಕೋರ್ಟ್ ಆದೇಶದ ಬಗ್ಗೆ ನನ್ನ ಬಳಿ ಹೆಚ್ಚಿನ ಮಾಹಿತಿ ಇಲ್ಲ. ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುವುದು ಇದ್ದರೆ ಪ್ರಜ್ವಲ್ ರೇವಣ್ಣ ಅವರ ವಕೀಲರು ಅದನ್ನು ನೋಡಿಕೊಳ್ಳುತ್ತಾರೆ.
– ಎಚ್.ಡಿ.ರೇವಣ್ಣ, ಶಾಸಕ