ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಜು 17 : ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದ ತಾಲ್ಲೂಕಿನ 350 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಜು. 22ರಂದು ಹಮ್ಮಿಕೊಳ್ಳಲಾಗಿದೆ ಎಂದು ಅರುಂಧತಿ ಸೇವಾ ಸಂಸ್ಥೆಯ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಸೇರಿದಂತೆ ಇತರೇ ಗಣ್ಯರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ತಾಲ್ಲೂಕಿನಲ್ಲಿ ಬಡ, ಮಧ್ಯಮವರ್ಗದ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಸಹಕಾರ ನೀಡುವುದರೊಂದಿಗೆ, ಉನ್ನತ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಳೆದ 11 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಗುತ್ತಿದೆ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದ ಮಕ್ಕಳ ಏಳಿಗೆಗೆ ಅವರ ಪೋಷಕರು ಸಾಕಷ್ಟು ತ್ಯಾಗ ಮಾಡಿರುತ್ತಾರೆ. ಮಕ್ಕಳಿಗೆ ಅಭಿನಂದಿಸುವ ಮೂಲಕ ಅವರ ಸಾಧನೆಗೆ ನಮಿಸುವ ಕೆಲಸ ಇದಾಗಿದ್ದು, ದಾನಿಗಳ ಸಹಕಾರದಿಂದ ಕಾರ್ಯಕ್ರಮ ನಡೆದುಕೊಂಡು ಬಂದಿದೆ
ಎಸ್ಸೆಸ್ಸೆಲ್ಸಿಯ 260 ವಿದ್ಯಾರ್ಥಿಗಳು, ಪಿಯುಸಿಯ 90 ವಿದ್ಯಾರ್ಥಿಗಳಿಗೆ ಈ ಬಾರಿ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದ್ದು, ಈವರೆಗೂ 4 ಸಾವಿರ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹ ಮಾಡುವ ಕೆಲಸ ಮಾಡಲಾಗಿದೆ ಜುಲೈ 22ರ ಬೆಳಿಗ್ಗೆ ವಿದ್ಯಾರ್ಥಿಗಳಿಗೆ ಸ್ಥಳೀಯ ಕಲೆ, ಸಂಸ್ಕೃತಿಗಳ ಪರಿಚಯ ಮಾಡಿಸುವ ಸಲುವಾಗಿ ಸಾಕಷ್ಟು ಜಾನಪದ ಕಲಾ ಪ್ರಕಾರಗಳ ಪ್ರದರ್ಶನ ಏರ್ಪಡಿಸಿದ್ದು, ಅದರಲ್ಲಿ ಆಸಕ್ತಿ ಮೂಡಿಸುವ ಪ್ರಯತ್ನವನ್ನು ಮಾಡಲಾಗುತ್ತದೆ’ ಎಂದರು.
ಇದೇ ವೇಳೆ ಉಪಾಧ್ಯಕ್ಷರಾದ ಜಾಲಿಗೆ ಮುನಿರಾಜು, ಖಜಾಂಜಿಯಾದ ಮಂಜುನಾಥ್, ಮಾಜಿ ಅಧ್ಯಕ್ಷರಾದ ಡಿ.ಆರ್.ವೇಣುಗೋಪಾಲ್, ಸಹ ಕಾರ್ಯದರ್ಶಿ ಎಂ.ಹರ್ಷನಾಥ್, ನಿರ್ದೇಶಕಾರದ ಅಣ್ಣೇಶ್ವರ ಮುನಿರಾಜು, ವೆಂಕಟಪ್ಪ, ಶ್ರೀನಿವಾಸ್, ಅನಿಲ್, ಸಿ.ಮುನಿಕೃಷ್ಣಪ್ಪ ಇದ್ದರು.