ಸುದ್ದಿಮೂಲ ವಾರ್ತೆ
ಜು,7:ತಿಪಟೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಕಾಲೇಜಿನಲ್ಲಿ ನಡೆದ ಪತ್ರಿಕಾ ದಿನಾಚರಣೆ ಮತ್ತು ಮಾಧ್ಯಮ ಕಾರ್ಯಾಗಾರವನ್ನು ಪತ್ರಕರ್ತರಾದ ಆರ್. ಕಾಮರಾಜ್ ಅವರು ಇಂದು ಉದ್ಘಾಟಿಸಿದರು. ಪ್ರಾಂಶುಪಾಲರಾದ ಡಾ.ಕುಮಾರಸ್ವಾಮಿ ಹೆಚ್.ಬಿ, ಉಜ್ಜಜ್ಜಿ ರಾಜಣ್ಣ, ಸಜ್ಜೆಹೊಸಹಳ್ಳಿ ದೇವರಾಜು, ಎಚ್.ಎನ್.ಶಂಕರಪ್ಪ ಅವರನ್ನು ಚಿತ್ರದಲ್ಲಿ ಕಾಣಬಹುದು.
ಉತ್ತಮ ಸಮಾಜ ಸೇವಕ ಪತ್ರಕರ್ತ- ಆರ್. ಕಾಮರಾಜ್
ಉತ್ತಮ ಸಮಾಜ ಸೇವಕನಾಗಲು ಪತ್ರಕರ್ತ ವೃತ್ತಿಯಿಂದ ಸಾಧ್ಯ ಎಂದು ಪತ್ರಕರ್ತರಾದ ಆರ್. ಕಾಮರಾಜ್ ಅವರು ತಿಳಿಸಿದ್ದಾರೆ.
ತಿಪಟೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಮತ್ತು ಮಾಧ್ಯಮ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಪತ್ರಕರ್ತರು ಸಂಕುಚಿತ ಮನೋಭಾವ ಬಿಡಬೇಕು ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸಬೇಕು. ಬಂಡವಾಳಶಾಹಿಯವರಿAದ ಪತ್ರಿಕೋದ್ಯಮ ದಾರಿಯನ್ನು ತಪ್ಪುತ್ತಿದೆ. ಪೀತ ಪತ್ರಿಕೋದ್ಯಮಕ್ಕೆ ಬಲಿಯಾಗದೆ. ಜ್ವಲಂತ ಸಮಸ್ಯೆಗಳು ಹಾಗೂ ಅಭಿವೃದ್ಧಿ ಕಡೆಗೆ ಲೇಖನಿಯನ್ನು ತೊಡಗಿಸಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅತಿಥಿಗಳಾಗಿ ಅಗಮಿಸಿದ್ದ ಹಿರಿಯ ಪತ್ರಕರ್ತರಾದ ಉಜ್ಜಜ್ಜಿ ರಾಜಣ್ಣ ಅವರು ಮಾತನಾಡಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಸ್ಥಳೀಯ ಘಟನೆಗಳಲ್ಲಿ ಎಲ್ಲಿ, ಹೇಗೆ, ಏಕೆ ಎಂಬ ಕುತೂಹಲವನ್ನು ಹೊಂದಿರಬೇಕು ಎಂದರು.
೨೦೨೩ ರ ಜಾಗತಿಕ ಸಮಯದಲ್ಲಿ ಅಭಿವೃದ್ಧಿಗಿಂತ ಅಭಿವೃದ್ಧಿ ವಿಕೋಪತೆಯೇ ಹೆಚ್ಚಾಗುತ್ತಿದೆ ಇದರಿಂದ ಭಾರತೀಯ ಸಂಸ್ಕೃತಿ ಕಣ್ಮರೆಯಾಗುತ್ತಿದೆ. ಪಂಚಾಯತ್ ರಾಜ್ ವ್ಯವಸ್ಥೆಯಡಿ ರಾಜಕೀಯ ವಿಫಲತೆ ಹೊಂದುತ್ತಿರುವುದನ್ನು ಕಾಣಬಹುದಾಗಿದೆ. ವಿದ್ಯಾರ್ಥಿಗಳು ಸಂಕುಚಿತ ಮನಸ್ಥಿತಿಯಿಂದ ಹೊರಬಂದು ವಿಶಾಲವಾದ ದೃಷ್ಟಿಯಿಂದ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ, ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಆಸಕ್ತಿಯನ್ನು ಹೊಂದಿ ಪತ್ರಿಕಾ ಧರ್ಮ ರಕ್ಷಿಸಿ ಎಂದು ಉಜ್ಜಜ್ಜಿ ರಾಜಣ್ಣ ಹೇಳಿದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಕುಮಾರಸ್ವಾಮಿ ಹೆಚ್.ಬಿ ಮಾತನಾಡಿ ಪತ್ರಕರ್ತರು ಪತ್ರಿಕಾ ಧರ್ಮದ ಅನುಸಾರವಾಗಿ ಸಂಪೂರ್ಣ ಮಾಹಿತಿಯನ್ನು ಅರಿತು ಸುದ್ದಿಯನ್ನು ಪ್ರಕಟಿಸಬೇಕು. ಪತ್ರಿಕೆಯಲ್ಲಿನ ಸುದ್ದಿ ಪಾರದರ್ಶಕತೆಯನ್ನು ಹೊಂದಿರಬೇಕು ಎಂದರು.
ತಮ್ಮ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ಪಿ. ವಿನುತ ಎಂಬುವರು ಈ ವರ್ಷ ತುಮಕೂರು ವಿವಿಯ ಪತ್ರಿಕೋದ್ಯಮ ಸ್ನಾತಕ ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದು ಶೀಘ್ರದಲ್ಲಿ ನಡೆಯುವ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆಯಲಿದ್ದಾರೆ. ಈ ಪತ್ರಿಕೋದ್ಯಮ ವಿಭಾಗಕ್ಕೆ ಅಗತ್ಯವಿರುವ ನೂತನ ಕೊಠಡಿ, ಬೆಂಚು, ಕ್ಯಾಮೆರಾ, ಕಂಪ್ಯೂಟರ್ ಮತ್ತಿತರವನ್ನು ಶೀಘ್ರವಾಗಿ ನೀಡಲಾಗುವುದು ಎಂದು ಭರವಸೆ ನೀಡಿದರು.
ತುಮಕೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾದ ಪೃಥ್ವಿರಾಜ್ ಅವರು ವಿಡಿಯೋ ನಿರ್ಮಾಣ, ಛಾಯಾಚಿತ್ರವನ್ನು ಹೇಗೆ ಸೆರೆ ಹಿಡಿಯಬೇಕು, ರೇಡಿಯೋ ಜಾಕಿ ಮತ್ತಿತರ ವಿಷಯಗಳ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಚಿನ್ನದ ಪದಕ ವಿಜೇತೆ ವಿನುತ. ಪಿ ಅವರನ್ನು ಪತ್ರಿಕೋದ್ಯಮ ವಿಭಾಗದ ವತಿಯಿಂದ ಸನ್ಮಾನಿಸಲಾಯಿತು. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಸಜ್ಜೆಹೊಸಹಳ್ಳಿ ದೇವರಾಜು, ಎಚ್.ಎನ್.ಶಂಕರಪ್ಪ, ಉಪನ್ಯಾಸಕರಾದ ನಾಗರಾಜು, ಎಂ.ಎಸ್. ಓಹಿಲಾ ಅವರು ಉಪಸ್ಥಿತರಿದ್ದರು. ವಿದ್ಯಾರ್ಥಿ ಸುಮನ್ ಶಂಕರ್ ನಿರೂಪಿಸಿದರು, ವಿದ್ಯಾರ್ಥಿನಿ ಕುಶಾಲಿನಿ ಮತ್ತು ಕುಸುಮ ತಂಡ ಪ್ರಾರ್ಥಿಸಿದರು.