ಸುದ್ದಿಮೂಲ ವಾರ್ತೆ
ಬೆಂಗಳೂರು,ಜು 22 : ಅರ್ಚಕರೊಬ್ಬರಿಗೆ ಇಪ್ಪತ್ತು ತಿಂಗಳಲ್ಲಿ ಹಣ ಡಬಲ್ ಮಾಡಿಕೊಡುವುದಾಗಿ ನಂಬಿಸಿ ಬರೋಬ್ಬರಿ 1.07 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಶೇಷಗಿರಿ ಬಂಧಿತ ಆರೋಪಿ.
ಷೇರು ಮಾರುಕಟ್ಟೆಯಲ್ಲಿ ಅನುಭವವಿದ್ದು, ಹಣವನ್ನು ಡಬಲ್ ಮಾಡಿಕೊಡುವುದಾಗಿ ಅರ್ಚಕ ರಾಘವೇಂದ್ರ ಅಚಾರ್ಯ ಎಂಬುವರಿಗೆ ನಂಬಿಸಿ ಮೋಸ ಮಾಡಿದ್ದಾನೆ ಎನ್ನಲಾಗಿದೆ. ಆರೋಪಿ ಶೇಷಗಿರಿ, ಬಿಕಾಂ ಪದವೀಧರನಾಗಿದ್ದು ವಿವಿಧ ಬ್ಯಾಂಕ್ ಮತ್ತು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ್ದ. ಜೊತೆಗೆ ಷೇರು ಮಾರುಕಟ್ಟೆ ಬಗ್ಗೆಯೂ ಪಂಟರ್ ಆಗಿದ್ದಾನೆ ಎನ್ನಲಾಗಿದೆ.
ಇನ್ನು ಅರ್ಚಕನಿಂದ ಹಂತ ಹಂತವಾಗಿ ಹಣ ಪಡೆದು ಷೇರು ಮಾರುಕಟ್ಟೆಗೆ ಬಳಸಿದ್ದಾನೆ. ಈ ಮೂಲಕ ಬರೋಬ್ಬರಿ 1.7 ಕೋಟಿ ರೂಪಾಯಿ ಹಣವನ್ನು ಪಡೆದುಕೊಂಡಿದ್ದಾನೆ. ಈ ಹಣವನ್ನು ವಾಪಸ್ ಕೇಳಿದ್ರೆ ಕೊಡದೇ ಸತಾಯಿಸಿದ್ದ. ಆಗ ದೂರು ಕೊಡ್ತೀನಿ ಅಂದಾಗ ಮೂವತ್ತು ಲಕ್ಷ ರೂಪಾಯಿ ಕೊಟ್ಟು ಮೊಬೈಲ್ ಸ್ವಿಚ್ಆಫ್ ಮಾಡಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.
ಈ ಬಗ್ಗೆ ಬನಶಂಕರಿ ಠಾಣೆಯಲ್ಲಿ ಅರ್ಚಕ ರಾಘವೇಂದ್ರ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆಯೇ ಆರೋಪಿಯನ್ನು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ಮಾತ್ರವಲ್ಲ 45 ಲಕ್ಷ ರೂಪಾಯಿ ಹಣವನ್ನು ಜಪ್ತಿ ಮಾಡಿದ್ದಾರೆ.