ಧಾರವಾಡ – ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ಗೆ ಪ್ರಧಾನಿ ಚಾಲನೆ
ಸುದ್ದಿಮೂಲ ವಾರ್ತೆ
ಬೆಂಗಳೂರು, ಜೂ, 27: ಧಾರವಾಡ – ಬೆಂಗಳೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಚಾಲನೆ ನೀಡಿದ್ದಾರೆ. ರೈಲು ಧಾರವಾಡದಿಂದ ಬೆಂಗಳೂರಿನತ್ತ ಬಂದು ತಲುಪಿದೆ.
ಧಾರವಾಡದಲ್ಲಿ ನಡೆದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಉದ್ಘಾಟನಾ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್, ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ಶಾಸಕರಾದ ಅರವಿಂದ ಬೆಲ್ಲದ್, ವಿಧಾನಪರಿಷತ್ ಸದಸ್ಯ ಎಸ್.ವಿ. ಸುಂಕನೂರು, ಹುಬ್ಬಳ್ಳಿ-ಧಾರವಾಡ ಮೇಯರ್ ವೀಣಾ ಭಾರದ್ವಾಜ್, ನೈರುತ್ಯ ರೈಲ್ವೆ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಕಿಶೋರ್ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಮಾತನಾಡಿ, ವಂದೇ ಭಾರತ್ ರೈಲು ಭಾರತೀಯ ತಂತ್ರಜ್ಞಾನದಿಂದ ರೂಪುಗೊಂಡಿದೆ. ಕರ್ನಾಟಕ ಮತ್ತು ಕೇಂದ್ರ ಸರ್ಕಾರ ಜೊತೆ ಜೊತೆಗೆ ಸಂಪರ್ಕ ಸಾಧನ ವಿಸ್ತರಣೆಗೆ ಶ್ರಮಿಸುತ್ತಿವೆ. ಶೇಕಡ 50 ಅನುದಾನವನ್ನು ರಾಜ್ಯ ಸರ್ಕಾರ ನೀಡುತ್ತಿದೆ. ರೈಲ್ವೆ ವಿಕಾಸಕ್ಕೆ ಎಲ್ಲರೂ ಶ್ರಮಿಸಬೇಕಿದೆ ಎಂದರು.
ವಿಶ್ವದ ಆರ್ಥಿಕತೆಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಮೂರನೇ ಸ್ಥಾನಕ್ಕೇರಲಿದೆ. ಮುಂದಿನ 15 ವರ್ಷದಲ್ಲಿ ಅಗ್ರ ಸ್ಥಾನಕ್ಕೆರಲು ಎಲ್ಲರೂ ಶ್ರಮಿಸಬೇಕಿದೆ ಎಂದು ಹೇಳಿದರು.
ಪ್ರಲ್ಹಾದ್ ಜೋಶಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಾಜಕೀಯ ಕಾರಣಕ್ಕಾಗಿ ಯಾವುದೇ ಆಶ್ವಾಸನೆ ನೀಡುವುದಿಲ್ಲ. ಕೆಲಸವನ್ನು ಮಾಡಿ ತೋರಿಸುತ್ತದೆ. ಧಾರವಾಡದಿಂದ ವಂದೇ ಭಾರತ ರೈಲು ಆರಂಭ ಆಗಬೇಕೆಂಬ ಬೇಡಿಕೆ ಇತ್ತು. ಆ ಬೇಡಿಕೆಯಂತೆ ಧಾರವಾಡದಿಂದ ರೈಲು ಸಂಚಾರ ಆರಂಭ ಮಾಡಿದೆ. ಹುಬ್ಬಳ್ಳಿಯಲ್ಲಿ ವಂದೇ ಭಾರತ ರೈಲು ನಿರ್ವಹಣೆ ಮಾಡಲು ಟೆಂಡರ್ ಪ್ರಕ್ರಿಯೆ ನಡೆದಿದೆ. ತದನಂತರ ವಂದೇ ಭಾರತ ರೈಲು ಸಮಯವನ್ನು ಬದಲಾವಣೆ ಮಾಡಲಾಗುತ್ತದೆ ಎಂದರು.
ವಂದೇ ಭಾರತ್ , ಸ್ವದೇಶಿ ನಿರ್ಮಾಣದ ಆತ್ಮ ನಿರ್ಭರ ರೈಲಾಗಿದೆ. ದೇಶದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 400 ವಂದೇ ಭಾರತ ರೈಲು ಓಡಿಸುವ ಗುರಿ ಇದೆ. ಬೆಳಗಾವಿಯಿಂದ ಈ ರೈಲು ಓಡಿಸಬೇಕೆಂಬ ಬೇಡಿದೆ ಇದೆ. ಅದನ್ನು ಸಹ ಸರ್ಕಾರ ಈಡೇರಿಸುತ್ತದೆ. ಭಾರತೀಯ ರೈಲ್ವೆಯ ಆಧುನಿಕತೆ ನಿರಂತರವಾಗಿ ನಡೆದಿದೆ. ದೇಶ ಒಂದುಗೂಡಿಸುವ ಕೆಲಸವನ್ನು ರೈಲ್ವೆ ಮಾಡುತ್ತಿದೆ. ವಿಶ್ವದ ನಾಲ್ಕನೇ ಅತಿದೊಡ್ಡ ಸಂಚಾರ ಜಾಲ ಭಾರತೀಯ ರೈಲ್ವೆ ಆಗಿದೆ. ಕರ್ನಾಟಕಕ್ಕೆ 7 ಸಾವಿರದ 561 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ ಎಂದು ಹೇಳಿದರು.
ನೈರುತ್ಯ ರೈಲ್ವೆ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಕಿಶೋರ್ , ಕರ್ನಾಟಕದ ಸಂಪರ್ಕ ಬಲವರ್ಧನೆಗೆ ಎಲ್ಲ ರೀತಿಯ ಪ್ರಯತ್ನ ನಡೆದಿದೆ. ರಾಜ್ಯದ ಉತ್ತರ – ದಕ್ಷಿಣ ಭಾಗಗಳನ್ನು ಜೋಡಿಸುವ ಮೊದಲ ವಂದೇ ಭಾರತ್ ರೈಲುಇದಾಗಿದೆ ಎಂದರು.