ಸುದ್ದಿಮೂಲ ವಾರ್ತೆ
ಬೆಂಗಳೂರು, ನ.25: ಪ್ರಧಾನಿ ಮೋದಿ ಅವರು ಶನಿವಾರ ಬೆಂಗಳೂರಿಗೆ ಭೇಟಿ ನೀಡಿ ಎಚ್ಎಲ್ ನಿರ್ಮಿತ ಯುದ್ಧ ವಿಮಾನ ‘ತೇಜಸ್’ನಲ್ಲಿ ಹಾರಾಟ ನಡೆಸಿ ಗಮನ ಸೆಳೆದರು.
ವಿಶೇಷ ವಿಮಾನದಲ್ಲಿ ಎಚ್ಎಎಲ್ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಬಳಿಕ ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು. ಭಾರತದ ವಾಯುಪಡೆ ಮತ್ತು ನೌಕಾಪಡೆಗೆ ಸೇರ್ಪಡೆಯಾಗಿರುವ ಯುದ್ಧ ವಿಮಾನ ಮೂಲಕ ಆಕಾಶದಲ್ಲಿ ತೇಲಾಡುವ ಮೂಲಕ ಅದರ ಅನುಭವವನ್ನು ತಮ್ಮದಾಗಿಸಿಕೊಂಡರು.
ಈ ಹಾರಾಟದ ನಂತರ ಎಕ್ಸ್ ಜಾಲತಾಣ ಮೂಲಕ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ‘ತೇಜಸ್ನಲ್ಲಿ ಒಂದು ಪಯಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಅನುಭವವು ವಿಸ್ಮಯಕಾರಿಯಾಗಿತ್ತು. ನಮ್ಮ ದೇಶದ ಸ್ಥಳೀಯ ಸಾಮರ್ಥ್ಯಗಳಲ್ಲಿ ನನ್ನ ವಿಶ್ವಾಸವನ್ನು ಈ ತೇಜಸ್ ಪಯಣ ಗಣನೀಯಾಗಿ ಹೆಚ್ಚಿಸಿದೆ. ಮತ್ತು ರಾಷ್ಟ್ರದ ಸಾಮರ್ಥ್ಯದ ಬಗ್ಗೆ ನನಗೆ ಹೊಸ ಹೆಮ್ಮೆ ಹಾಗೂ ಆಶಾವಾದಕ್ಕೂ ಕಾರಣವಾಗಿದೆ,’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಸ್ವದೇಶಿ ನಿರ್ಮಿತ ತೇಜಸ್ ವಿಮಾನವನ್ನು ಖರೀದಿಸಲು ಹಲವು ದೇಶಗಳು ಮುಂದಾಗಿವೆ. ಈ ವರ್ಷದ ಆರಂಭದಲ್ಲಿ ಪ್ರಧಾನಿಯವರು ಅಮೆರಿಕಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಮೆರಿಕಾದ ರಕ್ಷಣಾ ಉತ್ಪಾದನಾ ದೈತ್ಯ ಸಂಸ್ಥೆ ಜಿಇ ಏರೋಸ್ಪೆಸ್ ತೇಜಸ್ ಎಂಜಿನಿಯರಿಂಗ್ ಜಂಟಿಯಾಗಿ ಉತ್ಪಾದಿಸಲು ಹೆಚ್ಎಎಲ್ನೊಂದಿಗೆ ಒಪ್ಪಂದಕ್ಕೂ ಬಂದಿತ್ತು.
ಲಘು ಯುದ್ಧ ವಿಮಾನ ತೇಜತ್ ಹೊಸ ಪೀಳಿಗೆಯ ಬಹು ಉಪಯೋಗಿ ಯುದ್ಧ ವಿಮಾನವಾಗಿದೆ. ಆಕ್ರಮಣಕಾರಿ ವಾಯು ಕಾರ್ಯಾಚರಣೆ ಮತ್ತು ನೆಲದ ಕಾರ್ಯಾಚರಣೆಗಳಿಗೆ ಅನುಕೂಲವಾಗುವಂತಹ ವಿನ್ಯಾಸವನ್ನು ಹೊಂದಿದೆ.
ರಕ್ಷಣಾ ಉತ್ಪಾದನೆಯಲ್ಲಿ ಸ್ವದೇಶಿ ಉತ್ಪಾದನೆಗೆ ಒತ್ತು ನೀಡುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ತೇಜಸ್ ಯುದ್ಧ ವಿಮಾನದ ಪ್ರಗತಿಯನ್ನು ಈ ಸಂದರ್ಭದಲ್ಲಿ ಪಡೆದುಕೊಂಡ ಕೇಂದ್ರ ಸರ್ಕಾರದ ಮೇ ಇನ್ ಇಂಡಿಯಾ ಯೋಜನೆಯಡಿ ರಕ್ಷಣಾ ಉತ್ಪನ್ನಗಳ ಉತ್ಪಾದನೆ ಮತ್ತು ಅವುಗಳ ರಫ್ತು ಹೆಚ್ಚಿಸುವ ಆದ್ಯತೆಯನ್ನು ಪುನರುಚ್ಛರಿಸಿದರು ಎನ್ನಲಾಗಿದೆ.
ಅದ್ಧೂರಿ ಸ್ವಾಗತ
ಇಂದು ಬೆಳಗ್ಗೆ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಬಂದಿಳಿದ ಪ್ರಧಾನಿ ಮೋದಿ ಅವರನ್ನು ರಾಜ್ಯದ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ನಗರ ಪೊಲೀಸ್ ಆಯುಕ್ತ ದಯಾನಂದ್, ನಗರ ಜಿಲ್ಲಾಧಿಕಾರಿ ಕೆ. ದಯಾನಂದ್ ಇವರುಗಳು ಬರ ಮಾಡಿಕೊಂಡರು.
ಪ್ರಧಾನಿ ಮೋದಿ ಅವರನ್ನು ನೋಡಲು ಹೆಚ್ಎಎಲ್ ವಿಮಾನ ನಿಲ್ದಾಣದ ಹೊರಗೆ ನೂರಾರು ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಸೇರಿದ್ದು, ಪ್ರಧಾನಿಗಳು ಅವರತ್ತ ಕೈ ಬೀಸಿ ಹರ್ಷ ವ್ಯಕ್ಥಪಡಿಸಿದರು. ಪ್ರಧಾನಿ ಮೋದಿ ಅವರ ಆಗಮನದ ಹಿನ್ನೆಲೆಯಲ್ಲಿ ಹೆಚ್ಎಎಲ್ ವಿಮಾನ ನಿಲ್ದಾಣದ ಸುತ್ತ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.
ಹೆಚ್ಎಎಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿ ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ನಂತರ ಪ್ರಧಾನಿಗಳು ತೆಲಂಗಾಣ ವಿಧಾನಸಭಾ ಪ್ರಚಾರದಲ್ಲಿ ಪಾಲ್ಗೊಳ್ಳಲು ತೆಲಂಗಾಣಕ್ಕೆ ತೆರಳಿದರು.